ರೈತ ವಿರೋಧಿ ಕೃಷಿ ಕಾನೂನು ಜಾರಿ ಹಿಂದೆ 50 ಸಾವಿರ ಕೋಟಿ ರೂ. ಡೀಲ್: ದೇವನೂರ ಮಹಾದೇವ ಆರೋಪ
ಮೈಸೂರು,ಮಾ.13: ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾನೂನಿನ ಹಿಂದೆ 40-50 ಸಾವಿರ ಕೋಟಿ.ರೂ ಡೀಲ್ ನಡೆದಿದೆ ಎಂಬ ಸುದ್ದಿ ಇದ್ದು ಈ ಬಗ್ಗೆ ಪರಿಶೀಲನೆ ನಡೆಯಬೇಕು ಎಂದು ಖ್ಯಾತ ಸಾಹಿತಿ ದೇವನೂರ ಮಹಾದೇವ ಗಂಭೀರ ಆರೋಪ ಮಾಡಿದರು.
ಜನಾಂದೋನಗಳ ಮಹಾಮೈತ್ರಿ ಜಾಥಾ ಮೈಸೂರಿಗೆ ಆಗಮಿಸಿ ರವಿವಾರ ಬೆಳಿಗ್ಗೆ ಚಿಕ್ಕಗಡಿಯಾರದ ಬಳಿ ಸಭೆ ನಡೆಸಿತು. ಈ ವೇಳೆ ಭಾಗವಹಿಸಿ ಮಾತನಾಡಿದ ದೇವನೂರ ಮಹಾದೇವ ಅವರು, ಪ್ರಧಾನಿ ನರೇಂದ್ರ ಮೋದಿ ತುಂಡು ಎಂಬಂತೆ ರಾಜ್ಯದ ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿದ್ದು, ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕಾನೂನುಗಳನ್ನೇ ರಾಜ್ಯದಲ್ಲೂ ಜಾರಿಗೆ ತರುವ ಮೂಲಕ 40-50 ಸಾವಿರ ಕೋಟಿ ರೂ. ಡೀಲ್ ಮಾಡಿ ಒಳವ್ಯವಹಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವರಾಜ ಬೊಮ್ಮಾಯಿ ಅವರು ಎಂತಹ ಮೃದು ವ್ಯಕ್ತಿತ್ವ ಎಂತಹ ಹೃದಯವಂತ ವ್ಯಕ್ತಿತ್ವ ಉಳ್ಳವರಾಗಿದ್ದರು, ಆದರೆ ಮುಖ್ಯಮಂತ್ರಿಯಾದ ನಂತರ ಅವರ ಹೃದಯ ಕಲ್ಲಿನಷ್ಟೇ ಕಠಿಣವಾಗಿದ್ದು, ಇದು ಕೆಟ್ಟ ಬೆಳವಣಿಗೆ, ಕೆಟ್ಟ ಪರಿವರ್ತನೆ. ಅವರಿಗೆ ನಿಜವಾಗಲೂ ಮನುಷ್ಯತ್ವ ಇದ್ದರೆ ಈ ಕೂಡಲೇ ಈ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ದೇಶದ ಪ್ರಜೆಗಳನ್ನು ತನ್ನ ಮಕ್ಕಳು ಎಂದು ಹೇಳಿಕೊಳ್ಳೋಕೆ ಆಗದ ಹೃದಯ ಇಲ್ಲದ ಪ್ರಧಾನಿ ನರೇಂದ್ರ ಮೋದಿಗೆ ಈ ದೇಶದ ಪ್ರಧಾನಿಯಾಗಲು ಯೋಗ್ಯತೆ ಅರ್ಹತೆ ಇದಿಯಾ? ಅವರ ಹೃದಯದಲ್ಲಿ ಹೃದಯ ಇಲ್ಲ ಕಲ್ಲಿದೆ ಎಂದು ವಾಗ್ದಾಳಿ ನಡೆಸಿದರು.
ದೆಹಲಿಯ ನಾಲ್ಕು ಮೂಲೆಗಳಲ್ಲಿ ರೈತರು ವರ್ಷಾನುಗಟ್ಟಲೆ ಠಿಕಾಣಿ ಹೂಡಿ, ಟೆಂಟ್ ಹಾಕಿ ಸಾವಿರಾರು ಮಂದಿ ರೈತರು ಸತ್ತು ಧಾರುಣ ಪರಿಸ್ಥಿತಿ ಇದ್ದು ಶೀತಲ ಸಮರ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಆತ್ಮೀಯರಾಗಿದ್ದ ಮೇಘಾಲಯ ರಾಜ್ಯಪಾಲರಾದ ಸಕ್‍ಪಾಲ್ ಮಲ್ಲಿಕ್ ಮೋದಿ ಬಳಿಗೆ ಬಂದು ನೀವು ನಾಯಿ ಸತ್ತರೂ ಸಂತಾಪ ಸೂಚಿಸುತ್ತೀರಿ, ಸದ್ಯ ಐನೂರು ಜನ ರೈತರು ಸತ್ತಿದ್ದಾರೆ ಸಂತಾಪನೂ ಇಲ್ಲ, ಅಲ್ಲಿಗೆ ಹೋಗಿ ನೋಡಿಯೂ ಇಲ್ಲ, ಯಾಕೆ ಹೀಗೆ ಮಾಡುತ್ತಿದ್ದೀರಿ, ನೀವು ಅವರ ಬಳಿಗೆ ಹೋಗಿ ಸಮಸ್ಯೆ ಬಗೆಹರಿಸಿ ಎಂದು ಹೇಳುತ್ತಾರೆ.
ಆಗ ನಮ್ಮ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಅವರೇನು ನನಗಾಗಿ ಸತ್ತರ? ಎಂದು ಹೇಳುತ್ತಾರೆ. ಇದು ಎಂತಹ ನಿರ್ಧಯತೆ, ಎಂತಹ ಕಠೋರತೆ, ಎಂತಹ ದುಖದ ಸಮಾಚಾರ, ತನ್ನ ದೇಶದ ಪ್ರಜೆಗಳನ್ನು ತನ್ನ ಮಕ್ಕಳು ಎಂದು ಹೇಳಿಕೊಳ್ಳೋಕೆ ಆಗದ ಹೃದಯ ಇಲ್ಲದ ಪ್ರಧಾನಿ ನರೇಂದ್ರ ಮೋದಿಗೆ ಈ ದೇಶದ ಪ್ರಧಾನಿಯಾಗಲು ಯೋಗ್ಯತೆ ಅರ್ಹತೆ ಇದಿಯಾ? ಅವರ ಹೃದಯದಲ್ಲಿ ಹೃದಯ ಇಲ್ಲ ಕಲ್ಲಿದೆ ಎಂದು ಕಿಡಿಕಾರಿದರು.
ದೇಶವನ್ನು ಆಳುತ್ತಿರುವವರು ತನ್ನ ಪ್ರಜೆಗಳನ್ನು ತನ್ನ ಮಕ್ಕಳು ಎಂದು ಹೇಳಿಕೊಳ್ಳೋಕೆ ಹೃದಯ ಇಲ್ಲದವನು ದೇಶದ ಪ್ರಧಾನಿ ಆಗೋಗೆ ಯೋಗ್ಯನ ಅರ್ಹತೆ ಇದಿಯೇ, ಅವರ ಹೃದಯದಲ್ಲಿ ಹೃದಯ ಇಲ್ಲ ಕಲ್ಲಿದೆ ಎಂದು ಕಟುಕಿದರು.
ನಂತರ ಜಾಥಾ ಟೌನ್ ಹಾಲ್, ಮಾರ್ಗವಾಗಿ ಟೀ.ನರಸೀಪುರಕ್ಕೆ ತೆರಳಿತು.
ಜಾಥಾದಲ್ಲಿ ಜನಾಂದೋಲನಹಳಗ ಮಹಾಮೈತ್ರಿ ಸಂಚಾಲನ ಸಮಿತಿ ಸದಸ್ಯ ಉಗ್ರನರಸಿಂಹೇಗೌಡ, ಹಿರಿಯ ಸಮಾಜವಾದಿ ಪ.ಮಲ್ಲೇಶ್, ದೇವನೂರ ಮಹಾದೇವ ಅವರ ಪತ್ನಿ ಸುಮಿತ್ರಾ, ಅಭಿರುಚಿ ಗಣೇಶ್, ಕಾರ್ಮಿಕ ಮುಖಂಡ ಚಂದ್ರಶೇಖರ ಮೇಟಿ, ದಸಂಸ ಚೋರನಹಳ್ಳಿ ಶಿವಣ್ಣ, ರೈತರ ಸಂಘದ ಹೊಸಕೋಟೆ ಬಸವರಾಜು, ಪ್ರೊ.ಶಬ್ಬೀರ್ ಮುಸ್ತಾಫ, ಸೀಮಾ, ಸುನೀಲ್, ಸಿದ್ದಪ್ಪ, ರೈತ ಸಂಘದ ಪಿ.ಮರಂಕಯ್ಯ, ದಸಂಸ ಮುಖಂಡ ಕಲ್ಲಹಳ್ಳಿ ಕುಮಾರ್, ಎಐಎಂಎಸ್‍ಎಸ್ ನ ಅಭಿಲಾಷ, ಕಲಾವತಿ, ದಸಂಸದ ಕೆ.ವಿ.ದೇವೇಂದ್ರ, ಪ್ರಗತಿಪರ ಚಿಂತಕ ಗೋವಿಂದರಾಜು, ಮಂಡಕಳ್ಳಿ ಶಿವು ಸೇರಿದಂತೆ ಹಲವರು ಭಾಗವಹಿಸಿದ್ದರು.
ಕೇಂದ್ರದಲ್ಲಿ ನೂರಾರು ರೈತರು ಸತ್ತ ನಂತರ ಕೇಂದ್ರ ಸರ್ಕಾರ ಕೃಷಿ ಕಾಯ್ದೆದೆಯನ್ನು ಹಿಂಪಡೆಯಿತು. ಕೇಂದ್ರ ಸರ್ಕಾರ ಹಿಂಪಡೆದರೂ ರಾಜ್ಯ ಸರ್ಕಾರ ಹಿಂಪಡೆಯದೆ ಹಿಂದೇಟು ಹಾಕುತ್ತಿದ್ದು, ಇದೊಂದು ಪ್ರಜ್ಞೆ ಇಲ್ಲದ ಸರ್ಕಾರ.
- ಪ.ಮಲ್ಲೇಶ್, ಹಿರಿಯ ಸಮಾಜವಾದಿ
ಐಟಿ ಬಿಟಿಯವರು ಕೃಷಿ ಮಾಡಲು ಅರ್ಜಿ ಹಾಕಿದ್ದಾರೆ. ಹಾಗಾಗಿ ಕೃಷಿ ಕಾನೂನು ಜಾರಿಗೆ ತಂದೆವು ಎಂದು ಮಂತ್ರಿಯೊಬ್ಬರು ಹೇಳುತ್ತಾರೆ. ಐಟಿ ಬಿಟಿಯವರು 25 ಎಕರೆ ಕೊಂಡುಕೊಳ್ಳಬಹುದು, ಇ250 ಎಕರೆ ಕೊಂಡುಕೊಳ್ಳಲು ಸಾಧ್ಯನಾ? ಶಾಸಕರನ್ನು ಶಾಸನ ಮಾಡಿ ಎಂದು ವಿಧಾನಸಭೆಗೆ ಕಳುಹಿಸಿದರೆ ದಲ್ಲಾಳಿಗಳಂತೆ ನಡೆದುಕೊಳ್ಳುತ್ತಿದ್ದಾರೆ.
-ಉಗ್ರನರಸಿಂಹೇಗೌಡ, ಜನಾಂದೋಲನಗಳ ಮಹಾಮೈತ್ರಿ ಸಂಚಾಲನ ಸಮಿತಿ ಸದಸ್ಯ.
ಎಪಿಎಂಸಿ, ಭೂಸುಧಾರಣಾ ಮತ್ತು ಜಾನುವಾರು ಈ ಮೂರು ಕಾಯ್ದೆಗಳು ರೈತರಿಗೆ ಮರಣಶಾಸನ ಬರೆದ ಕಾಯ್ದೆಗಳು. ಈ ಕಾಯ್ದೆಗಳನ್ನು ವಿರೋಧಿಸಿ ರಾಜ್ಯದ ಮೂರು ಕಡೆಗಳಿಂದ ಜಾಥಾ ಹೊರಟಿದ್ದು, ಬೆಂಗಳೂರಿನಲ್ಲಿ ಮಾ.15 ರಂದು ಸಮಾವೇಶ ನಡೆಸಲಿದ್ದೇವೆ. ಈ ಮೂರು ಕಾಯ್ದೆಗಳನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ನಿಲ್ಲದು.
-ಹೊಸಕೋಟೆ ಬಸವರಾಜು, ರೈತ ಮುಖಂಡ.