×
Ad

ಶಾಲೆಗಳ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ತೆರವು ವಿಚಾರ: ಹೈಕೋರ್ಟ್ ಗೆ ವರದಿ ಸಲ್ಲಿಕೆ

Update: 2022-03-14 18:29 IST

ಬೆಂಗಳೂರು, ಮಾ.14: ರಾಜ್ಯಾದ್ಯಂತ ಶಾಲೆಗಳ ಮೇಲೆ ಹಾದು ಹೋಗುವ ಎಲ್ಲ ವಿದ್ಯುತ್ ತಂತಿಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಹೈಕೋರ್ಟ್‍ಗೆ ರಾಜ್ಯ ಸರಕಾರ ವರದಿ ಸಲ್ಲಿಸಿದೆ.  

ಕೊಪ್ಪಳದ ಬಿಸಿಎಂ ಹಾಸ್ಟೆಲ್‍ನಲ್ಲಿ 2019ರ ಆ.15ರಂದು ಧ್ವಜಸ್ತಂಭ ತೆರವುಗೊಳಿಸುವ ವೇಳೆ ವಿದ್ಯುತ್ ತಂತಿ ತಗುಲಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪಿಐಎಲ್ ಕುರಿತು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ವಿಚಾರಣೆ ನಡೆಸಿತು. 

ಕೆಪಿಟಿಸಿಎಲ್ ಪರ ವಾದಿಸಿದ ವಕೀಲರು, ಕೋರ್ಟ್ ನಿರ್ದೇಶನದಂತೆ ಎಲ್ಲ ಎಸ್ಕಾಂಗಳು ಶಿಕ್ಷಣ ಸಂಸ್ಥೆಗಳ ಬಳಿಯ ವಿದ್ಯುತ್ ಮಾರ್ಗಗಳನ್ನು ತೆರವುಗೊಳಿಸುವ ಕಾಮಗಾರಿ ಆರಂಭಿಸಿವೆ. ಕೆಲವು ಕಡೆ ಟೆಂಡರ್ ಕರೆದು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳು ಸದ್ಯದಲ್ಲಿಯೇ ಪ್ರತ್ಯೇಕ ವರದಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿವೆ ಎಂದರು.

ಪ್ರಕರಣದಲ್ಲಿ ಅಮಿಕಸ್ ಕ್ಯೂರಿಯಾಗಿರುವ ವಕೀಲೆ ಬಿ.ವಿ.ವಿದ್ಯುಲ್ಲತಾ ಅವರಿಗೆ ಎಸ್ಕಾಂಗಳ ವರದಿ ಪರಿಶೀಲಿಸಿ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ನಿರ್ದೇಶಿಸಿದ ಪೀಠವು ವಿಚಾರಣೆಯನ್ನು ಮಾ.21ಕ್ಕೆ ಮುಂದೂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News