ಕಾಶ್ಮೀರದಲ್ಲಿ ಮೆಹಬೂಬ ಮುಫ್ತಿಯೊಂದಿಗೆ ಸರಕಾರ ರಚಿಸಿದ ಬಿಜೆಪಿಯಿಂದ ನೈತಿಕತೆ ಕಲಿಯಬೇಕಿಲ್ಲ: ಬಿ.ಕೆ.ಹರಿಪ್ರಸಾದ್
ಬೆಂಗಳೂರು, ಮಾ.14: ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಗೆ ಬೆಂಬಲವಾಗಿರುವ ಮೆಹಬೂಬ ಮುಫ್ತಿಯೊಂದಿಗೆ ಸರಕಾರ ರಚಿಸಿದ ನಿಮಗೆ ನೈತಿಕ ಸರಕಾರಗಳ ವಿಷಯದ ಮೇಲೆ ಮಾತಾಡುವುದಕ್ಕೆ ನೈತಿಕತೆ ಇಲ್ಲ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.
ಸೋಮವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅವರು ಪ್ರಸ್ತಾಪಿಸಿ, ನಮ್ಮ ಪಕ್ಷಕ್ಕೆ ಬಂದು ಶಾಸಕರಾಗಿ ಸರಕಾರ ರಚನೆಯಾಗಿರುವುದು ಅನೈತಿಕ ಎನ್ನುವುದಾದರೆ, ಕಡಿಮೆ ಸ್ಥಾನಗಳಿಸಿದ ಪಕ್ಷಕ್ಕೆ ಹೆಚ್ಚು ಸ್ಥಾನಗಳಿಸಿದ ಪಕ್ಷ ಮನೆಯ ಬಾಗಿಲಿಗೆ ಹೋಗಿ ಅಧಿಕಾರ ನೀಡಿದ್ದು ಅನೈತಿಕವಲ್ಲವೇ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಹರಿಪ್ರಸಾದ್, ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಗೆ ಬೆಂಬಲವಾಗಿರುವ ಮೆಹಬೂಬ ಮುಫ್ತಿಯೊಂದಿಗೆ ಸರಕಾರ ರಚಿಸಿದ ನಿಮಗೆ ನೈತಿಕ ಸರಕಾರಗಳ ವಿಷಯದ ಮೇಲೆ ಮಾತಾಡುವುದಕ್ಕೆ ನೈತಿಕತೆ ಇಲ್ಲ ಎಂದು ನುಡಿದರು.
ನಾವು ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಬಾರದೆಂದು ಮನೆ ಬಾಗಿಲಿಗೆ ಹೋಗಿದ್ದು ನಿಜ. ಅಧಿಕಾರ ಕೊಟ್ಟಿದ್ದು ಸಹ ನಿಜ ಎಂದೂ ಅವರು ಉಲ್ಲೇಖಿಸಿದರು.