ಹಿಜಾಬ್ ಪ್ರಕರಣ: ಮಂಗಳವಾರ ತೀರ್ಪು ಪ್ರಕಟಿಸಲಿರುವ ಹೈಕೋರ್ಟ್
ಬೆಂಗಳೂರು: ಹಿಜಾಬ್ ನಿರ್ಬಂಧಿಸಿದ್ದ ಕೆಲವು ಕಾಲೇಜುಗಳ ಕ್ರಮ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿಗೆ ಸರಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆಲವು ಮುಸ್ಲಿಮ್ ವಿದ್ಯಾರ್ಥಿನಿಯರು ಸಲ್ಲಿಸಿದ್ದ ರಿಟ್ ಅರ್ಜಿಗಳ ವಿಚಾರಣೆ ಈಗಾಗಲೇ ಹೈಕೋರ್ಟ್‍ನಲ್ಲಿ ಪೂರ್ಣಗೊಂಡಿದ್ದು, ತೀರ್ಪು ಮಂಗಳವಾರ (ನಾಳೆ) ಪ್ರಕಟಗೊಳ್ಳಲಿದೆ.
ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‍ನ ತ್ರಿಸದಸ್ಯ ನ್ಯಾಯಪೀಠದಲ್ಲಿ ಉಡುಪಿಯ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರೇಷಮ್ ಹಾಗೂ ಇತರೆ ವಿದ್ಯಾರ್ಥಿನಿಯರ ಪೋಷಕರು ಸಲ್ಲಿಸಿದ್ದ 9 ರಿಟ್ ಅರ್ಜಿಗಳು ಹಾಗೂ 20ಕ್ಕೂ ಹೆಚ್ಚು ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಎಲ್ಲ ಅರ್ಜಿದಾರರ ಪರ ವಕೀಲರ ಹಾಗೂ ಸರಕಾರಿ ಪರ ವಕೀಲರ ವಾದವನ್ನು ಆಲಿಸಿದ್ದ ಹೈಕೋರ್ಟ್ ತೀರ್ಪುನ್ನು ಕಾಯ್ದಿರಿಸಿತ್ತು.
ಈ ರಿಟ್ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಝೈಬುನ್ನೀಸಾ ಮುಹಿಯುದ್ದೀನ್ ತ್ರಿಸದಸ್ಯ ನ್ಯಾಯಪೀಠ ಸತತ 11 ದಿನಗಳ ಕಾಲ ವಿಚಾರಣೆ ನಡೆಸಿ, ವಾದ ಮುಕ್ತಾಯಗೊಳಿಸಿ ತೀರ್ಪುನ್ನು ಕಾಯ್ದಿರಿಸಿದೆ.