ಚಿಕ್ಕಮಗಳೂರು: ಆರ್ ಟಿಇ ಯೋಜನೆಯಡಿ ಖಾಸಗಿ ಶಾಲೆಗೆ ದಾಖಲಾದ ದಲಿತ ಬಾಲಕಿಗೆ ಕಿರುಕುಳ ಆರೋಪ; ಜಿಲ್ಲಾಧಿಕಾರಿಗೆ ದೂರು
ಚಿಕ್ಕಮಗಳೂರು, ಮಾ.14: ಆರ್ ಟಿಇ ಯೋಜನೆಯಡಿಯಲ್ಲಿ ಖಾಸಗಿ ಶಾಲೆಗೆ ದಾಖಲಾಗಿದ್ದ ದಲಿತ ಸಮುದಾಯದ ಬಾಲಕಿಯನ್ನು ಶಾಲೆ ಬಿಡಿಸುವ ನಿಟ್ಟಿನಲ್ಲಿ ಶಾಲೆಯ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೇ ಖಾಸಗಿ ಶಾಲೆ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ವಿಶ್ವರತ್ನ ಯುವ ಸಂಘ ಮನವಿ ಮಾಡಿದೆ.
ಸೋಮವಾರ ನೊಂದ ಕುಟುಂಬದ ಸದಸ್ಯರೊಂದಿಗೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ ಸಂಘದ ಜಿಲ್ಲಾಧ್ಯಕ್ಷ ವೆಂಕಟೇಶ್, ಈ ಸಂಬಂಧ ಮನವಿ ಸಲ್ಲಿಸಿದ್ದು, ದಲಿತ ಕುಟುಂಬ ಬಾಲಕಿ ಹಾಗೂ ಪೋಷಕರಿಗೆ ಖಾಸಗಿ ಶಾಲೆ ಸಿಬ್ಬಂದಿ ನೀಡುತ್ತಿರುವ ಕಿರುಕುಳವನ್ನು ತಪ್ಪಿಸಬೇಕು. ಬಾಲಕಿ ಶಿಕ್ಷಣ ಮುಂದುವರಿಸಲು ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.
ನಗರದ ಟಿಪ್ಪು ನಗರದ ನಿವಾಸಿಯಾಗಿರುವ ರಾಜು ಹಾಗೂ ಅಂಬಿಕಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರು ಮಕ್ಕಳ ಪೈಕಿ ಹಿರಿಯ ಮಗಳು ವಿಕಲಚೇತನ ಮಗುವಾಗಿರುವ ಹಿನ್ನೆಲೆಯಲ್ಲಿ ಕಿರಯ ಮಗಳು ಕಾವ್ಯಾಳನ್ನು ಚೆನ್ನಾಗಿ ಓದಿಸುವ ಆಸೆಯಿಂದ ಪೋಷಕರು ಸರ್ವೋದಯ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದಾರೆ.
ಎಲ್‍ಕೆಜಿ, ಯುಕೆಜಿಯನ್ನು ಇದೇ ಖಾಸಗಿ ಶಾಲೆಯಲ್ಲಿ ಸಂಪೂರ್ಣ ಶುಲ್ಕ ಪಾವತಿಸಿ ಓದಿಸಿದ ಪೋಷಕರು 1ನೇ ತರಗತಿಗೆ ಆರ್ ಟಿಇಅಡಿಯಲ್ಲಿ ಸೇರಿದ್ದಾರೆ. ಸದ್ಯ 3ನೇ ತರಗತಿಯಲ್ಲಿ ಓದುತ್ತಿರುವ ರಾಜು, ಅಂಬಿಕಾ ದಂಪತಿಯ ಮಗಳಿಗೆ ಶಾಲೆಯ ಪ್ರಾಂಶುಪಾಲ ಹಾಗೂ ಕೆಲ ಶಿಕ್ಷಕರು ಸುಖಾಸುಮ್ಮನೆ ಕಿರುಕುಳ ನೀಡುತ್ತಿದ್ದು, ನಿನ್ನಿಂದ ಶಾಲೆಗೆ ಯಾವ ಆದಾಯವೂ ಇಲ್ಲ, ಶಾಲೆಗೆ ಏಕೆ ಬರುತ್ತೀಯಾ, ಬೇರೆ ಶಾಲೆಗೆ ಸೇರು ಎಂದು ಪ್ರತಿದಿನ ನಿಂದಿಸುತ್ತಾ ಕಿರುಕುಳ ನೀಡುತ್ತಿದ್ದಾರೆ. ಈ ಮೂಲಕ ಎಳೆಯ ವಯಸ್ಸಿನ ಶಾಲಾ ಬಾಲಕಿಯ ಮನಸಿಗೆ ನೋವುಂಟು ಮಾಡುತ್ತಿದ್ದಾರೆ ಎಂದು ಮುಖಂಡರು ಮನವಿಯಲ್ಲಿ ಆರೋಪಿಸಿದ್ದಾರೆ.
ಶಿಕ್ಷಕರು, ಪ್ರಾಂಶುಪಾಲರ ವರ್ತನೆ ಬಗ್ಗೆ ಬಾಲಕಿ ತನ್ನ ಪೋಷಕರ ಬಳಿ ದೂರು ಹೇಳಿದ್ದು, ಇದನ್ನು ಪ್ರಶ್ನಿಸಿದ ರಾಜು, ಅಂಬಿಕಾ ಅವರ ವಿರುದ್ಧವೂ ಶಾಲೆಯ ಪ್ರಾಂಶುಪಾಲರು ಅನುಚಿತವಾಗಿ ನಡೆದುಕೊಂಡಿದ್ದಾರೆ. ಅಲ್ಲದೇ ಅಂಬಿಕಾ ಅವರ ವಿಕಲಚೇತನ ಮಗಳನ್ನು ಶಾಲೆಯ ಬಳಿ ಕರೆದೊಯ್ದಿದ್ದ ಸಂದರ್ಭದಲ್ಲೂ ನಿಂದಿಸಿ ಅವಮಾನಿಸಿದ್ದಾರೆಂದು ಮನವಿಯಲ್ಲಿ ಆರೋಪಿಸಿದ್ದು, ಆರ್ ಟಿಇಅಡಿ ದಾಖಲಾದ ಒಂದೇ ಕಾರಣಕ್ಕೆ ದಲಿತ ಸಮುದಾಯದ ಶಾಲಾ ಬಾಲಕಿಯನ್ನು ಶಾಲೆಯಿಂದ ಹೊರ ಹಾಕಲು ಖಾಸಗಿ ಶಾಲೆಯ ಪ್ರಾಂಶುಪಾಲರುಮ ಶಿಕ್ಷಕರು ಕಿರುಕುಳ ನೀಡುತ್ತಿದ್ದಾರೆ. ಕೂಡಲೇ ಈ ಶಾಲೆಯ ಪ್ರಾಂಶುಪಾಲರು, ಶಿಕ್ಷಕರ ವಿರುದ್ಧ ಕ್ರಮವಹಿಸಬೇಕು. ದಲಿತ ಸಮುದಾಯದ ಬಾಲಕಿ ಶಿಕ್ಷಣದಿಂದ ವಂಚಿತಳಾಗದಂತೆ ಕ್ರಮವಹಿಸಬೇಕೆಂದು ಮನವಿ ಮೂಲಕ ಜಿಲ್ಲಾಧಿಕಾರಿಯನ್ನು ಒತ್ತಾಯಿಸಲಾಗಿದೆ.
ಈ ವೇಳೆ ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಸಂತೋಷ್ ಉಪಸ್ಥಿತರಿದ್ದರು.
ಆರ್ ಟಿಇಅಡಿಯಲ್ಲಿ ಬಾಲಕಿಯನ್ನು ಖಾಸಗಿ ಶಾಲೆಗೆ ದಾಖಲಿಸಲಾಗಿದೆ. ಬಾಲಕಿಯ ಶಿಕ್ಷಣದ ಶುಲ್ಕವನ್ನು ಸರಕಾರ ಭರಿಸುತ್ತದೆ. ಆದರೆ ಸರ್ವೋದಯ ಖಾಸಗಿ ಶಾಲೆಯ ಪ್ರಾಂಶುಪಾಲರು ಬಾಲಕಿ ಪೋಷಕರು ಹಣ ಕಟ್ಟಿಲ್ಲ ಎಂದು ಬಾಲಕಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಮೂಲಕ ಬಾಲಕಿಯನ್ನು ಶಿಕ್ಷಣದಿಂದ ವಂಚಿತಳನ್ನಾಗಿ ಮಾಡಲು ಯತ್ನಿಸಿದ್ದಾರೆ. ಬಾಲಕಿ ತಂದೆ ಹಮಾಲಿ ಕೆಲಸ ಮಾಡುತ್ತಿದ್ದು, ತಾಯಿ ಅಂಗವಿಕಲ ಮಗಳನ್ನು ನೋಡಿಕೊಂಡು ಮನೆಯಲ್ಲಿದ್ದಾರೆ. ಆರ್ಥಿಕವಾಗಿ ಭಾರೀ ಸಂಕಷ್ಟದಲ್ಲಿರುವ ಈ ಕುಟುಂಬದ ವಿರುದ್ಧ ಶಾಲೆಯವರು ನಡೆದುಕೊಂಡಿರುವ ರೀತಿಗೆ ಕ್ಷಮೆ ಇಲ್ಲ. ಶಾಲೆ ವಿರುದ್ಧ ಬಿಇಒ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಸೂಕ್ತ ಕ್ರಮವಹಿಸುವ ಭರವಸೆ ನೀಡಿದ್ದಾರೆ.
-ವೆಂಕಟೇಶ್, ಜಿಲ್ಲಾಧ್ಯಕ್ಷ, ವಿಶ್ವರತ್ನ ಯುವ ಸಂಘ
-----------------------------------------------------------
ನನ್ನ ಓರ್ವ ಮಗಳು ಅಂಗವಿಕಲೆ, ಅವಳನ್ನು ಶಾಲೆಗೆ ಸೇರಿಸಲು ಸಾಧ್ಯವಿಲ್ಲ. ಮತ್ತೋರ್ವ ಮಗಳಾದರೂ ಚೆನ್ನಾಗಿ ಓದಲಿ ಎಂದು ಸರ್ವೋದಯ ಎಂಬ ಖಾಸಗಿ ಶಾಲೆಗೆ ಸೇರಿಸಿದ್ದೆವು. ಹಣ ಕಟ್ಟಿ ಎಲ್‍ಕೆಜಿ, ಯುಕೆಜಿ ಓದಿಸಿದ್ದೇವೆ. ಈ ವೇಳೆ ಶಾಲೆಯವರಿಂದ ಯಾವುದೇ ತೊಂದರೆ ಇರಲಿಲ್ಲ. ಆದರೆ ನಮ್ಮ ಮಗಳನ್ನು ಆರ್ ಟಿಇ ಅಡಿಯಲ್ಲಿ ಇದೇ ಶಾಲೆಗೆ ಸೇರಿಸಿದ ಬಳಿಕ ಶಾಲೆಯ ಪ್ರಾಂಶುಪಾಲರು ಹಾಗೂ ಶಿಕ್ಷಕರು ಹಣ ಕಟ್ಟಿಲ್ಲ ಎಂದು ಮಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಶಾಲೆಯವರು ಕೇಳಿದ್ದ ಎಲ್ಲ ಶುಲ್ಕವನ್ನು ಕಟ್ಟಿದ್ದರೂ ಕಿರುಕುಳ ನೀಡುತ್ತಿದ್ದಾರೆ. ಕಿರುಕುಳ ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದೇವೆ. ಜಿಲ್ಲಾಧಿಕಾರಿ ಈ ಪ್ರಕರಣವನ್ನು ಪರಿಶೀಲಿಸಿ ನನ್ನ ಮಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಕ್ರಮವಹಿಸಬೇಕು.
- ಅಂಬಿಕಾ, ಕಾವ್ಯಾಳ ತಾಯಿ