ಜಾಮೀನು ಕೊಡಿಸದ ಹಿನ್ನೆಲೆಯಲ್ಲಿ ಹಲ್ಲೆ: ಆರೋಪಿಗೆ ಏಳು ವರ್ಷ ಜೈಲು ಶಿಕ್ಷೆ

Update: 2022-03-14 16:20 GMT

ಬೆಂಗಳೂರು, ಮಾ.14: ಕ್ರಿಮಿನಲ್ ಪ್ರಕರಣ ಆರೋಪದಡಿ ಜೈಲು ಸೇರಿದ್ದ ತನಗೆ ಜಾಮೀನು ಕೊಡಿಸಲು ನಿರಾಕರಿಸಿದ್ದಕ್ಕಾಗಿ ಮಾರಕಾಸ್ತ್ರಗಳಿಂದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದ ಮುನಿರಾಜ ಯಾನೆ ಹೂವಾಗೆ ನಗರದ 60ನೆ ಸಿಸಿಎಚ್ ಕೋರ್ಟ್ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದೆ.

ದಂಡ ಪಾವತಿಸಲು ವಿಫಲನಾದಲ್ಲಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿದೆ. ಸೂಕ್ತ ಸಾಕ್ಷಾಧಾರಗಳು ಇಲ್ಲದ ಕಾರಣ ಈ ಪ್ರಕರಣದ ಇತರ ಆರೋಪಿಗಳಾದ ಪ್ರಶಾಂತ ಯಾನೆ ಮುಳ್ಳ, ನವೀನಕುಮಾರ ಯಾನೆ ಮಾಮಾ ಅವರನ್ನು ಖುಲಾಸೆಗೊಳಿಸಿದೆ.

ಪ್ರಕರಣವೊಂದರಲ್ಲಿ ಬನಶಂಕರಿ ಪೊಲೀಸರಿಂದ ಬಂಧನಕ್ಕೊಳಪಟ್ಟಿದ್ದ ಮುನಿರಾಜ ಯಾನೆ ಹೂವಾಗೆ, ವೆಂಕಟೇಶ್ ಯಾನೆ ಅಪ್ಪಿ ಎಂಬುವರು 2015ರ ಜನವರಿಯಲ್ಲಿ ಜಾಮೀನು ಕೊಡಿಸಿದ್ದರು. ಮತ್ತೊಂದು ಪ್ರಕರಣದಲ್ಲಿ ಜೈಲು ಸೇರಿದ್ದ ರೌಡಿಶೀಟರ್ ಮುನಿರಾಜ, ಜಾಮೀನು ಕೊಡಿಸುವಂತೆ ವೆಂಕಟೇಶ್‍ಗೆ ಮತ್ತೊಮ್ಮೆ ದುಂಬಾಲು ಬಿದ್ದಿದ್ದ. ಅದಕ್ಕೆ ವೆಂಕಟೇಶ್ ನಿರಾಕರಿಸಿದ್ದರು. ಇದರಿಂದ ಕುಪಿತನಾಗಿದ್ದ ಆತ ತನ್ನ ಸಹಚರರ ಜೊತೆ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ.

2015ರ ಎಪ್ರಿಲ್ 7ರಂದು ಯಡಿಯೂರಿನ ಎ.ಕೆ.ಕಾಲನಿಯ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಘಟನೆ ನಡೆದಿತ್ತು. ಅದೇ ದಿನ ವೆಂಕಟೇಶ್ ಬನಶಂಕರಿ ಠಾಣೆಗೆ ದೂರು ನೀಡಿದ್ದರು. ಬನಶಂಕರಿ ಪೊಲೀಸರು 2015ರ ಮೇ 28ರಂದು 3ನೆ ಎಸಿಎಂಎಂ ಕೋರ್ಟ್‍ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News