ಶೇ. 10ರಷ್ಟು ಮೀಸಲಾತಿ ಜಾರಿಗೊಳಿಸದಿದ್ದರೆ, ರಾಜ್ಯಾದ್ಯಂತ ಹೋರಾಟ: ಡಾ.ಶಂಕರ್ ಗುಹಾ

Update: 2022-03-14 16:36 GMT

ಬೆಂಗಳೂರು, ಮಾ.14: ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರಕಾರ ಶೇ. 10ರಷ್ಟು ಮೀಸಲಾತಿ ಘೋಷಣೆ ಮಾಡಿದ್ದು, ಈಗ ಹಲವು ರಾಜ್ಯಗಳಲ್ಲಿ ಕಾರ್ಯರೂಪಕ್ಕೂ ಬರುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲು ಸರಕಾರ ಮೀನಮೇಷ ಎಣಿಸುತ್ತಿದೆ. ಒಂದು ವೇಳೆ ಈ ಕಾಯ್ದೆಯನ್ನು ಜಾರಿಗೊಳಿಸದಿದ್ದಲ್ಲಿ, ರಾಜ್ಯಾದ್ಯಂತ ಜನಾಂದೋಲನ ಹೋರಾಟ ನಡೆಸುವುದಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಡಾ. ಶಂಕರ್ ಗುಹಾ ದ್ವಾರಕಾನಾಥ್ ಬೆಳ್ಳೂರು ಅವರು ಎಚ್ಚರಿಕೆ ನೀಡಿದ್ದಾರೆ. 

ಸೋಮವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಈ ಮೀಸಲಾತಿಯನ್ನು ಜಾರಿಮಾಡಲು ಪ್ರತಿಯೊಂದು ರಾಜ್ಯವೂ ತನಗೆ ಬೇಕಾದಂತೆ ಅರ್ಹತಾ ಮಾನದಂಡಗಳನ್ನು ರಚಿಸಬಹುದು ಎಂದು ಕೇಂದ್ರ ಸರಕಾರ ನಿರ್ದೇಶನ ನೀಡಿದೆ. ಈಗಾಗಲೇ 11 ರಾಜ್ಯಗಳು ಈ ಮೀಸಲಾತಿಯನ್ನು ಜಾರಿಗೆ ತಂದಿವೆ. ಕೇರಳ, ಮಹಾರಾಷ, ಗುಜರಾತ್ ಉತ್ತರಾಖಂಡ್, ಜಾಖರ್ಂಡ್, ಮಿಜೋರಾಂ, ದೆಹಲಿ, ಅಸ್ಸಾಂ, ಜಮ್ಮು ಕಾಶ್ಮೀರ, ಗೋವಾ, ತೆಲಂಗಾಣ ಮತು ಆಂಧ್ರಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಶೇ.10ರಷ್ಟು ಮೀಸಲಾತಿ ಯೋಜನೆ ಜಾರಿಯಲ್ಲಿದೆ ಎಂದರು.

ಆದರೆ ನಮ್ಮ ರಾಜ್ಯದಲ್ಲಿ ಈ ಹಿಂದೆ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ರಾಜೀನಾಮೆ ನೀಡುವ ಒಂದು ದಿನ ಮೊದಲು ಸಚಿವ ಸಂಪುಟದಲ್ಲಿ ಈ ವಿಚಾರ ಚರ್ಚೆಗೆ ತಂದಿದ್ದರು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರಕಾರ ಮೀಸಲಾತಿ ಅನುಷ್ಠಾನಕ್ಕೆ ಮನಸು ಮಾಡುತ್ತಿಲ್ಲ. ಈ ಮೀಸಲಾತಿ ಜಾರಿಯಾದರೆ, ಬಡಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾನ್ವೇಷಣೆಯಲ್ಲಿ ನಿರತ ಬಡ ಯುವಕ, ಯುವತಿಯರಿಗೆ ಸಹಾಯವಾಗುತ್ತದೆ. ಸರಕಾರ ಇದನ್ನು ಕೂಡಲೆ ಜಾರಿಗೆ ತರಬೇಕು ಎಂದರು.

ಈ ನಿಟ್ಟಿನಲ್ಲಿ ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಗಡವು ನೀಡುತ್ತಿದ್ದೇವೆ. ಈ ಮೀಸಲಾತಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಲು ಇಡಬ್ಲ್ಯುಎಸ್ ಮೀಸಲಾತಿ ಹೋರಾಟ ಸಮಿತಿ ರಚಿಸಿದ್ದೇವೆ. ರಾಜ್ಯ ಸರಕಾರ ಕೂಡಲೇ ಕಾರ್ಯಪ್ರವೃತ್ತರಾಗಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಲು ಸಿದ್ಧರಿದ್ದೇವೆ. ನಾವು ಆರ್ಥಿಕವಾಗಿ ಹಿಂದುಳಿದಿದ್ದೇವೆಯೇ ವಿನಃ ದೈಹಿಕ ಹೋರಾಟದಲ್ಲಿ ಹಿಂದೆ ಬೀಳುವುದಿಲ್ಲ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿ ಹೋರಾಟ ಸಮಿತಿಯ ಮುಖ್ಯ ಸಲಹೆಗಾರ ಪ್ರೊ. ಕೆ.ಇ. ರಾಧಾಕೃಷ್ಣ, ಕಾರ್ಯದರ್ಶಿ ಎಚ್.ಎ. ಶ್ರೀನಿವಾಸ್, ಸದಸ್ಯರುಗಳಾದ ಡಾ. ಆಡೂರು ಗುರುಚರಣ್ ಮತ್ತು ಬಿ.ಎಸ್. ದತ್ತಾತ್ರೇಯ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News