ಗೊಮ್ಮಟೇಶ್ವರ ಕುರಿತು ಹೇಳಿಕೆ ಪ್ರಕರಣ: ಕ್ಷಮೆಯಾಚಿಸಿದ ಅಯೂಬ್ ಖಾನ್
ಮೈಸೂರು,ಮಾ.14: ಜೈನ ಧರ್ಮ ಹಾಗೂ ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ವಿಚಾರಕ್ಕೆ ಸಂಬಂಧಿಸಿ ಇಂಡಿಯನ್ ನ್ಯೂ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಅಯೂಬ್ ಖಾನ್ ಕ್ಷಮೆ ಯಾಚಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಯಾವುದೇ ಜಾತಿ, ಧರ್ಮದವರಿಗೆ ನೋವುಂಟು ಮಾಡಬೇಕು ಎಂಬ ಉದ್ದೇಶದಿಂದ ಈ ಹೇಳಿಕೆ ನೀಡಿರಲಿಲ್ಲ, ಸಂಸದ ಪ್ರತಾಪ್ ಸಿಂಹ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿಕೊಂಡು ಹೇಳಿಕೆ ನೀಡಿದ್ದರಿಂದ ನಾನು ಆ ರೀತಿಯ ಹೇಳಿಕೆ ನೀಡಿದ್ದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ನನಗೆ ಬೇಸರ ತರಿಸಿತು ಎಂದು ಹೇಳಿದರು.
ಈ ವಿಚಾರದಿಂದ ಜೈನ ಧರ್ಮದ ಗುರುಗಳು ಹಾಗೂ ಆ ಸಮುದಾಯದ ಜನರಿಗೆ ನೋವಾಗಿರುವುದು ನನ್ನ ಗಮನಕ್ಕೆ ಬಂತು. ಈ ಸಂಬಂಧ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗಡೆ ಅವರು ಆಪ್ತಸಹಾಯಕರು ದೂರವಾಣಿ ಕರೆ ಮಾಡಿ ಯಾಕೆ ರೀತಿಯ ಹೇಳಿಕೆ ನೀಡಿದಿರಿ ಎಂದು ಪ್ರಶ್ನಿಸಿದರು. ಜೊತೆಗೆ ಇನ್ನೊಬ್ಬ ಜೈನ ಧರ್ಮದ ಸ್ವಾಮೀಜಿ ಸಹ ನನ್ನ ಹೇಳಿಕೆ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಹಾಗಾಗಿ ಇವರ ಮನಸ್ಸಿಗೆ ನೋವಾಗಿರುವುದನ್ನು ಅರಿತು ನಾನು ಮಾಜಿ ಸಚಿವ ತನ್ವೀರ್ ಸೇಠ್ ಅವರ ಸಲಹೆ ಮೇರೆಗೆ ಬಹಿರಂಗ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು 23 ದಿನಗಳ ಕಾಲ ಜೈಲಿನಲ್ಲಿದ್ದು ಬಂದಿದ್ದೇನೆ. ಸದ್ಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ತೀರ್ಪು ನನ್ನ ಪರ ಬರಲಿದೆ ಎಂಬ ವಿಶ್ವಾಸವಿದೆ. ಹಾಗಾಗಿ ಈ ವಿಚಾರದ ಬಗ್ಗೆ ನಾನು ಮತ್ತೆ ಮಾತನಾಡುವುದಿಲ್ಲ. ಆದರೆ ಜೈನ ಧರ್ಮ ಶಾಂತಿಗೆ ಹೆಸರಾದ ಧರ್ಮ ಅವರು ನನ್ನನ್ನು ಕ್ಷಮಿಸುತ್ತಾರೆ ಎಂಬ ನಂಬಿಕೆ ಹೊಂದಿದ್ದೇನೆ ಎಂದು ಹೇಳಿದರು.
ಕೆಲವು ನನ್ನ ರಾಜಕೀಯ ವಿರೋಧಿಗಳು ನನ್ನ ವಿರುದ್ಧ ಪಿತೂರಿ ಮಾಡಿದರು. ಇವರ ಪಿತೂರಿಯಿಂದ ನಾನು ಸಂಕಷ್ಟ ಅನುಭವಿಸಬೇಕಾಯಿತು. ಹಾಗಾಗಿ ನಾನು ಇಂಡಿಯನ್ ನ್ಯೂ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಯಾವುದಾದರೊಂದು ರಾಷ್ಟ್ರೀಯ ಪಕ್ಷಕ್ಕೆ ಸೇರಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ದೇವದತ್ತ ಉಪಸ್ಥಿರಿದ್ದರು.