ಆನ್‍ಲೈನ್ ಜೂಜು ನಿಷೇಧಕ್ಕೆ ಕಾನೂನು ತಂದರೂ ನ್ಯಾಯಾಲಯದಿಂದ ತಡೆ: ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾ. 14: ‘ರಾಜ್ಯದಲ್ಲಿನ ಆನ್‍ಲೈನ್ ಜೂಜಾಟ ನಿಯಂತ್ರಣ ಕಾನೂನು ರೂಪಿಸಿ ಅದನ್ನು ಜಾರಿಗೊಳಿಸಿದರೂ ನ್ಯಾಯಾಲಯ ತಡೆ ನೀಡಿರುವುದರಿಂದ ಜೂಜಾಟ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲೆ ಮಾತನಾಡುತ್ತಿದ್ದ ಕಾಂಗ್ರೆಸ್ ಸದಸ್ಯ ಕೆ.ಆರ್. ರಮೇಶ್ ಕುಮಾರ್ ಪ್ರಸ್ತಾಪಿಸಿದ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಸೋಷಿಯಲ್ ಕ್ಲಬ್ ಹೆಸರಿನಲ್ಲಿ ಜೂಜಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಈ ದಂಧೆ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಿದೆ' ಎಂದರು.
‘ನಮ್ಮ ಪೊಲೀಸರು ಏನಾದರೂ ದಾಳಿ ನಡೆಸಿದರೆ ಮರುದಿನ ಠಾಣೆಯಲ್ಲೇ ಜಾಮೀನು ತೆಗೆದುಕೊಂಡು ಹೊರಬರುತ್ತಾರೆ. ಪ್ರತಿನಿತ್ಯ 25 ಲಕ್ಷ ರೂನಿಂದ 30 ಲಕ್ಷ ರೂ.ವಹಿವಾಟು ಮಾಡಲಾಗುತ್ತಿದೆ. ಆದರೆ, ಇಂತಹ ವ್ಯಕ್ತಿಗಳನ್ನು ಶಿಕ್ಷಿಸಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ನಾವು ಕಾನೂನು ತಂದರೂ ಅದು ಕೋರ್ಟ್‍ನಲ್ಲಿ ತಡೆಯಾಗಿದೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಜೂಜಾಟ ಆಡುವವರು ಮತ್ತು ಆಡಿಸುವವರು ಸಿಕ್ಕಿಬಿದ್ದರೂ ಅವರನ್ನು ಏನೂ ಮಾಡಲು ಆಗುತ್ತಿಲ್ಲ. ಈ ಹಿಂದೆ ನಾನು ಗೃಹ ಸಚಿವನಾಗಿದ್ದಾಗ ಕಾನೂನು ಸಚಿವರ ಜೊತೆ ಸಮಾಲೋಚನೆ ನಡೆಸಿ ‘ಉದ್ದೇಶ ಪೂರ್ವಕ ಅಪರಾಧ' ಎಂದು ಮಾಡಿದ್ದೇವೆ. ಈ ಹಿಂದೆ 500 ರೂ.ಪಾವತಿಸಿ ಪೊಲೀಸ್ ಠಾಣೆಗಳಲ್ಲೇ ಜಾಮೀನು ಪಡೆದು ಹೊರಬಂದು ಅದೇ ಕೃತ್ಯದಲ್ಲಿ ತೊಡಗುತ್ತಿದ್ದರು' ಎಂದು ಅವರು ತಿಳಿಸಿದರು.
ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ರಮೇಶ್ ಕುಮಾರ್, ಗ್ರಾಮೀಣ ಪ್ರದೇಶದಲ್ಲಿನ ಸರಕಾರಿ ಶಾಲೆಗಳಲ್ಲಿ ಮಧ್ಯ ಸೇವನೆ ಮತ್ತು ಜೂಜಾಟ ಆಡುವ ವ್ಯಕ್ತಿಗಳ ಮೇಲೆ ಪೊಲೀಸ್ ಇಲಾಖೆ ಸೂಕ್ತ ನಿಗಾ ಇರಿಸಬೇಕು. ಅಲ್ಲದೆ, ಐಪಿಎಲ್ ಕ್ರಿಕೆಟ್ ಆಟದ ಹೆಸರಿನಲ್ಲಿ ನಡೆಯುವ ‘ಸರ್ವನಾಶ'ವನ್ನು ತಪ್ಪಿಸಬೇಕು ಎಂದು ಇದೇ ವೇಳೆ ಆಗ್ರಹಿಸಿದರು.