ಸುಳ್ಳು ದಾಖಲೆ ಕೊಟ್ಟರೆ ಫಲಾನುಭವಿಗಳು ಹೇಗೋ ಆಯ್ಕೆಯಾಗುತ್ತಾರೆ: ಸರಕಾರದ ವಿರುದ್ಧ ಸ್ಪೀಕರ್ ಕಾಗೇರಿ ಅಸಮಾಧಾನ

Update: 2022-03-14 18:11 GMT

ಬೆಂಗಳೂರು, ಮಾ. 14: ‘ಸುಳ್ಳು ಪ್ರಮಾಣಪತ್ರ ಕೊಟ್ಟುಬಿಡಿ, ಸುಳ್ಳು ದಾಖಲೆಗಳನ್ನು ಕೊಟ್ಟರೆ ಸಾಕು ವಸತಿ ಯೋಜನೆಗೆ ಫಲಾನುಭವಿಗಳನ್ನು ಹೇಗೋ ಆಯ್ಕೆ ಮಾಡುತ್ತಾರೆ. ಈಗ ಅದೇ ತಾನೆ ನಡೆಯುತ್ತಿರುವುದು' ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯ ಸರಕಾರದ ವಿರುದ್ಧವೇ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.

ಸೋಮವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಕೇಳಿದ ಪ್ರಶ್ನೆಗೆ ಸರಕಾರದ ಉತ್ತರಕ್ಕೆ ಆಕ್ಷೇಪಿಸಿದ ಅವರು, ಈ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದರೂ ಸಣ್ಣ-ಪುಟ್ಟ ಲೋಪಗಳನ್ನು ಸರಿಪಡಿಸದಿದ್ದರೆ ಹೇಗೆ? ತ್ವರಿತಗತಿಯಲ್ಲಿ ವಸತಿ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆಗೆ ಇರುವ ಆದಾಯ ಪ್ರಮಾಣ ಪತ್ರದ ಗೊಂದಲ ಸರಿಪಡಿಸಬೇಕು' ಎಂದು ಸೂಚನೆ ನೀಡಿದರು.

ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಸಿ.ಟಿ.ರವಿ, ‘ವಸತಿ ಯೋಜನೆಯಡಿ ಮನೆ ಹಂಚಿಕೆ ಕೇವಲ ಪುಸ್ತಕಕ್ಕೆ ಸೀಮಿತಗೊಳ್ಳುತ್ತಿದೆ. ಆದಾಯ ಮಿತಿ 32 ಸಾವಿರ ರೂ.ಗಳಿಗೆ ಮಾಡಿದ್ದು, ಕಂದಾಯ ಇಲಾಖೆ 45 ಸಾವಿರ ರೂ.ಗಳಿಗೆ ಕಡಿಮೆ ಮೊತ್ತದ ಪ್ರಮಾಣ ಪತ್ರವನ್ನು ನೀಡುವುದಿಲ್ಲ. ಇದನ್ನು ಕೂಡಲೇ ಸರಿಪಡಿಸಬೇಕು. ಅಲ್ಲದೆ, ಆದಾಯದ ಮಿತಿಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಬಳಿಕ ಪ್ರತಿಕ್ರಿಯೆ ನೀಡಿದ ವಸತಿ ಸಚಿವ ವಿ.ಸೋಮಣ್ಣ, ‘ಇನ್ನು ಮುಂದೆ ಆದಾಯ ಮಿತಿಯನ್ನು ಗ್ರಾಮೀಣ ಪ್ರದೇಶಗಳಲ್ಲಿ 1.20 ಲಕ್ಷ ರೂ. ಹಾಗೂ ನಗರಪ್ರದೇಶಗಳಲ್ಲಿ 3ಲಕ್ಷ ರೂ.ಗೆ ಏರಿಕೆ ಮಾಡುವುದು. ಈ ಕುರಿತು ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ನೀಡಲಿದ್ದಾರೆ. ಇದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದರು.

‘ಈವರೆಗೂ ಗ್ರಾಮೀಣ ಭಾಗಗಳಲ್ಲಿ 32 ಸಾವಿರ ರೂ.ಹಾಗೂ ನಗರ ಪ್ರದೇಶಗಳಲ್ಲಿ 87 ಸಾವಿರ ರೂ. ಆದಾಯ ಮಿತಿ ನೀಡಿದ್ದೆವು. ಮಾನದಂಡದ ಪ್ರಕಾರ ಮೇಲ್ಕಂಡ ಮೊತ್ತ ನಿಗದಿಪಡಿಸಲಾಗಿತ್ತು. ಅದನ್ನು ಶೀಘ್ರದಲ್ಲೇ ಸರಿಪಡಿಸುವ ಕೆಲಸವನ್ನು ಮಾಡಲಾಗುವುದು. ಬಡವರಿಗೆ ಅನುಕೂಲ ಕಲ್ಪಿಸಲು ಕ್ರಮ ವಹಿಸಲಾಗುವುದು' ಎಂದು ಸೋಮಣ್ಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News