ಕುದುರೆಮುಖ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲು ಕೇಂದ್ರ ಪರಿಸರ ಇಲಾಖೆಗೆ ಹೊಣೆ: ಹಾಲಪ್ಪ ಆಚಾರ್

Update: 2022-03-14 17:48 GMT

ಬೆಂಗಳೂರು, ಮಾ.14: ಸ್ಥಗಿತಗೊಂಡಿರುವ ಕುದುರೆಮುಖ ಅದಿರು ಕಾರ್ಖಾನೆಯ ನಂತರ ಅಲ್ಲಿನ ಕಟ್ಟಡ ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ ಸುಪ್ರೀಂಕೋರ್ಟ್ ತೀರ್ಪಿನಂತೆ ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಗೆ ಆರ್ ಅಂಡ್ ಆರ್ ಯೋಜನೆ ಸಿದ್ಧಪಡಿಸಲು ವಹಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

ಸೋಮವಾರ ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆಯಡಿ ವಿಷಯ ಪ್ರಸ್ತಾಪಿಸಿದ ಮೂಡಿಗೆರೆಯ ಬಿಜೆಪಿ ಸದಸ್ಯ ಎಂ.ಪಿ.ಕುಮಾರಸ್ವಾಮಿ, ಕುದುರೆಮುಖ ಅದಿರು ಕಾರ್ಖಾನೆ ಸ್ಥಗಿತಗೊಂಡ ನಂತರ ಅಲ್ಲಿನ ಕಟ್ಟಡ ಮತ್ತು ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲು, ಪ್ರವಾಸಿ ಕೇಂದ್ರ ಸ್ಥಾಪನೆ ಅಥವಾ ಯಾವುದಾದರೂ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಚಿವರ ಗಮನ ಸಳೆದರು.

ಇದಕ್ಕೆ ಉತ್ತರಿಸಿದ ಸಚಿವ ಹಾಲಪ್ಪ ಆಚಾರ್, ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಕುದುರೆ ಮುಖ ಕಟ್ಟಡ ಮತ್ತು ಮೂಲಭೂತ ಸೌಲಭ್ಯಗಳನ್ನು ಅರಣ್ಯ ಇಲಾಖೆಗೆ ವರ್ಗಾಯಿಸುವಂತೆ ಉಸ್ತುವಾರಿ ಸಮಿತಿಗೆ ವಹಿಸಲಾಗಿದೆ ಎಂದರು. 

ಆರ್ ಅಂಡ್ ಆರ್ ಯೋಜನೆ ಅನುಷ್ಠಾನಕ್ಕೆ ಕುದುರೆಮುಖ ಸಂಸ್ಥೆಗೆ ಅಗತ್ಯ ಹಣಕಾಸು ನೆರವನ್ನು ಒದಗಿಸುವಂತೆ ತೀರ್ಪು ನಲ್ಲಿ ತಿಳಿಸಲಾಗಿದ್ದು, ಕುದುರೆಮುಖ ಸಂಸ್ಥೆಯು 25ಕೋಟಿ ರೂಪಾಯಿ ಪರಿಹಾರ ಮೊತ್ತ ಮತ್ತು ವಾರ್ಷಿಕ 5ಕೋಟಿ ರೂಪಾಯಿಗಳನ್ನು ಸಂರಕ್ಷಣೆ, ಸಂಶೋಧನೆಗಾಗಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಖಾತೆಯಲ್ಲಿ ಜಮಾ ಮಾಡುವಂತೆ ಆದೇಶದಲ್ಲಿ ಉಲೇಖಿಸಿದೆ ಎಂದು ಅವರು ಹೇಳಿದರು.

ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರತಿನಿಧಿ, ರಾಜ್ಯ ಸರಕಾರದ ಪ್ರತಿನಿಧಿ ಮತ್ತು ರಾಜ್ಯದ ಎನ್‍ಜಿಒನಿಂದ ಒಬ್ಬ ಪರಿಣಿತ ಪ್ರತಿನಿಧಿಯನ್ನು ಒಳಗೊಂಡ ಉಸ್ತುವಾರಿ ಸಮಿತಿ ರಚಿಸಿ ಆರ್ ಅಂಡ್ ಆರ್ ಅನುಷ್ಠಾನಗೊಳಿಸಬೇಕು. ಕುದುರೆಮುಖ ಸಂಸ್ಥೆಯು ಮೂಲ ಸೌಲಭ್ಯಗಳನ್ನು ಮೂಲಬೆಲೆಗೆ ರಾಜ್ಯದ ಅರಣ್ಯ ಇಲಾಖೆಗೆ ವರ್ಗಾಯಿಸುವಂತೆ ತೀರ್ಪಿನಲ್ಲಿ ತಿಳಿಸಿದೆ ಎಂದು ಅವರು ವಿವರಿಸಿದರು.

ಸುಪ್ರೀಂಕೋರ್ಟ್‍ನ ಆದೇಶದ ನಡಾವಳಿ ಹಿನ್ನಲೆಯಲ್ಲಿ ಕುದುರೆ ಮುಖ ಸಂಸ್ಥೆ, ಅರಣ್ಯ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕುದುರೆಮುಖ ಸಂಸ್ಥೆಯು ಹೊಂದಿದ ಕಟ್ಟಡ ಹಾಗೂ ಮೂಲ ಸೌಕರ್ಯ ಗಳ ಬಗ್ಗೆ ತೀರ್ಮಾನಿಸಬೇಕಿದೆ ಎಂದು ಹಾಲಪ್ಪ ಆಚಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News