ರಾಜ್ಯವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿರುವ ಬಜೆಟ್: ಯು.ಟಿ.ಖಾದರ್ ವಾಗ್ದಾಳಿ

Update: 2022-03-14 18:07 GMT

ಬೆಂಗಳೂರು, ಮಾ.14: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿರುವ ಈ ಬಜೆಟ್ ರಾಜ್ಯವನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತಿಲ್ಲ, ಬದಲಾಗಿ ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿದೆ. ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಒಂದೇ ಒಂದು ಯೋಜನೆ ಈ ಬಜೆಟ್‍ನಲ್ಲಿ ಇಲ್ಲ. ಇದೊಂದು ಸಾಲ, ಸಾರಾಯಿ ಮೇಲೆ ಅವಲಂಬಿತವಾದ ಬಜೆಟ್ ಎಂಬುದು ಗೊತ್ತಾಗುತ್ತದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಟೀಕಿಸಿದರು.

ಸೋಮವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 72 ಸಾವಿರ ಕೋಟಿ ರೂ.ಸಾಲ, 29 ಸಾವಿರ ಕೋಟಿ ರೂ.ಸಾರಾಯಿಯಿಂದ ಆದಾಯ ಬರುತ್ತದೆ. ಜನರಿಗೆ ಸಾರಾಯಿ ಕೊಟ್ಟು ಹಣ ಸಂಗ್ರಹ ಮಾಡಲು ಹೊರಟಿದ್ದಾರೆ. ಕುಡಿದವನು ಹೋದ, ಆದರೆ 29 ಸಾವಿರ ಕೋಟಿ ರೂ. ಆದಾಯ ಬರುತ್ತೆ. 72 ಸಾವಿರ ಕೋಟಿ ರೂ. ಸಾಲ ಪಡೆದು ಅಭಿವೃದ್ಧಿ ಮಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಜಿಎಸ್ಟಿ ತೆರಿಗೆ ಬಗ್ಗೆ ನಮ್ಮ ರಾಜ್ಯಕ್ಕೆ ಬರಬೇಕಿರುವ ಹಕ್ಕನ್ನು ಪಡೆಯಲು ಪ್ರಯತ್ನಿಸಬೇಕು. 1.26 ಲಕ್ಷ ಕೋಟಿ ರೂ.ನಮಗೆ ಜಿಎಸ್ಟಿ ಪಾಲು ಬರಬೇಕು. ಆದರೆ, ನಮಗೆ 42 ಸಾವಿರ ಕೋಟಿ ರೂ.ಮಾತ್ರ ಬರುತ್ತಿದೆ. ಜಿಎಸ್ಟಿ ಉತ್ತಮ ನೀತಿ, ಅದನ್ನು ಅನುಷ್ಠಾನಗೊಳಿಸಿದ ರೀತಿ ಸರಿಯಲ್ಲ. ಇದರಿಂದ, ಎಲ್ಲ ರಾಜ್ಯ ಸರಕಾರಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಖಾದರ್ ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ 179 ಕೋಟಿ ರೂ.ಕಡಿಮೆಯಾಗಿದೆ. ಒಂದೇ ಒಂದು ಡಿಗ್ರಿ, ಪಿಯುಸಿ ಕಾಳೇಜು ಆರಂಭ ಮಾಡುವ ಪ್ರಸ್ತಾವನೆ ಇಲ್ಲ. ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಾಲೆಗೆ ಹೋಗುವ ಮಕ್ಕಳು ಅಲ್ಲಿ ಶುಲ್ಕ ಕಟ್ಟಲು ಆಗುವುದಿಲ್ಲ ಎಂದು ಹೇಳಿ. ಶೇ.50ರಷ್ಟು ಮಕ್ಕಳು ಸರಕಾರಿ ಶಾಲೆಗೆ ಬರುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ಕಟ್ಟಡ, ಪೀಠೋಪಕರಣ, ಶಿಕ್ಷಕರ ಕೊರತೆ ಇದೆ. ಇದಕ್ಕೆ ಕ್ರಿಯಾಯೋಜನೆ ರೂಪಿಸಬೇಕಲ್ಲ ಎಂದು ಅವರು ಪ್ರಶ್ನಿಸಿದರು.

ಶಾಲಾ ಮಕ್ಕಳಲ್ಲಿ ಶಿರವಸ್ತ್ರಕ್ಕೆ ಸಂಬಂಧಿಸಿದಂತೆ ಉಂಟಾದ ಸಮಸ್ಯೆ, ಈಗ ಅವರು ಪರೀಕ್ಷೆ ಬರೆಯಲು ಆಗುತ್ತಿಲ್ಲ. ಸರಕಾರ ಎಲ್ಲ ವಿಚಾರಗಳನ್ನು ನ್ಯಾಯಾಲಯದ ಮೇಲೆ ಬಿಡದೆ, ಉತ್ತಮ ರೀತಿಯಲ್ಲಿ ಬಗೆಹರಿಸಲು ಯಾಕೆ ಆಸಕ್ತಿ ವಹಿಸಲಿಲ್ಲ. ಕೋಮುವಾದಿಗಳ ಉಪಟಳವನ್ನು ಮೌನವಾಗಿ ಆನಂದಿಸುವುದು ಯಾಕೆ? ಶಾಲಾ ಕಾಲೇಜುಗಳಲ್ಲಿ ಉತ್ತಮ ವಾತಾವರಣ ನಿರ್ಮಿಸಬೇಕಲ್ಲ. ನ್ಯಾಯಾಲಯದ ಮಧ್ಯಂತರ ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿಕೊಂಡರು ಎಂದು ಅವರು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾನೂನು ಸಚಿವ ಮಾಧುಸ್ವಾಮಿ, ನ್ಯಾಯಾಲಯಕ್ಕೆ ಹೋಗುವವರಿಗೆ ತಡೆಯಲು ನಮ್ಮಿಂದ ಸಾಧ್ಯವೇ? ಅವರಿಗೆ ನ್ಯಾಯಾಲಯಕ್ಕೆ ಹೋಗಲು ಸರಕಾರ ಹೇಳಿತ್ತಾ? ಅವರಿಗಿರುವ ನಾಗರಿಕ ಹಕ್ಕಿನಂತೆ ಅವರು ಹೋಗಿದ್ದಾರೆ. ನ್ಯಾಯಾಲಯದ ಮಧ್ಯಂತರ ಆದೇಶದಂತೆ ನಾವು ಸುತ್ತೊಲೆ ಹೊರಡಿಸಿದ್ದೇವೆ ಎಂದರು.

ಸರಕಾರ ಮುಂದೆ ನಿಂತು ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆಸಲು ಪ್ರಯತ್ನಿಸಬೇಕು. ಯಾರಿಗೆ ಈ ಸಮಸ್ಯೆಯಿಂದ ಪರೀಕ್ಷೆ ಬರೆಯಲು ಅವಕಾಶ ಕೈತಪ್ಪಿದೆಯೋ ಅವರಿಗೆ ಅವಕಾಶ ನೀಡಬೇಕು. ಆ ಮಕ್ಕಳನ್ನು ನಮ್ಮ ಮಕ್ಕಳಂತೆ ಎಂದು ಭಾವಿಸಿ, ಅವರ ಭವಿಷ್ಯ ಮಸುಕಾಗದಂತೆ ತೀರ್ಮಾನ ಮಾಡಬೇಕು ಎಂದು ಖಾದರ್ ಹೇಳಿದರು.

2013ರಲ್ಲಿ ಹಿಂದುಳಿದ ವರ್ಗದವರಿಗೆ 3,113 ಕೋಟಿ ರೂ.ಇತ್ತು, ಈ ಬಾರಿ 2,371 ಕೋಟಿ ರೂ.ಆಗಿದೆ. ಬಜೆಟ್ ಗಾತ್ರದ ಪ್ರಕಾರ ಈ ಮೊತ್ತ 4,319 ಕೋಟಿ ರೂ.ಆಗಬೇಕಿತ್ತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಅರಿವು ಯೋಜನೆ ರದ್ದು ಮಾಡಿದ್ದಾರೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಅನುದಾನ ಕಡಿತ ಮಾಡಲಾಗಿದೆ. ಬಜೆಟ್‍ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 1,401 ಕೋಟಿ ರೂ.  ನೀಡಲಾಗಿದೆ.ನಮ್ಮ ಸರಕಾರದ ಅವಧಿಯಲ್ಲಿ 2,800 ಕೋಟಿ ರೂ.ಅನುದಾನ ಇಟ್ಟು, ಬೇರೆ ಬೇರೆ ಯೋಜನೆಗಳನ್ನು ನೀಡಿದ್ದೆವು ಎಂದು ಖಾದರ್ ಹೇಳಿದರು.

ಕ್ರೈಸ್ತರಿಗೆ 200 ಕೋಟಿ ರೂ.ಇತ್ತು ಅದನ್ನು ಈಗ 50 ಕೋಟಿ ರೂ. ಮಾಡಿದ್ದಾರೆ. ರಾಜ್ಯದಲ್ಲಿ ಅಪೂರ್ಣವಾಗಿರುವ 153 ಶಾದಿ ಮಹಲ್‍ಗಳ ಕಾಮಗಾರಿ ಪೂರ್ಣಗೊಳಿಸಲು 58 ಕೋಟಿ ರೂ.ಗಳನ್ನು ನೀಡುವಂತೆ ಮನವಿ ಸಲ್ಲಿಸಿದ್ದರೂ ಅದನ್ನು ಪರಿಗಣಿಸಲಾಗಿಲ್ಲ. ಪ್ರಧಾನಮಂತ್ರಿ ಜನವಿಕಾಸ್ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರಿಗೆ ಸಿಗುವ 300 ಕೋಟಿ ರೂ.ಳನ್ನು ಸೇರಿಸಿ 1,401 ಕೋಟಿ ರೂ.ಗಳನ್ನು ತೋರಿಸಲಾಗಿದೆ ಎಂದು ಅವರು ಟೀಕಿಸಿದರು.

ಕರಾವಳಿಗೆ ಸರಕಾರದಿಂದ ಅನ್ಯಾಯ

ಬಿಜೆಪಿ ಪಕ್ಷಕ್ಕೆ ಕಳೆದ ಬಾರಿ ದೊಡ್ಡ ಶಕ್ತಿ ನೀಡಿದ ಕರಾವಳಿ ಜನರಿಗೆ ಸರಕಾರ ಅನ್ಯಾಯ ಮಾಡಿದೆ. ಆ ಭಾಗಕ್ಕೆ ಒಂದೇ ಒಂದು ಯೋಜನೆ ಇಲ್ಲ. ಮೀನುಗಾರರು ಸಣ್ಣ ಸಣ್ಣ ದೋಣಿ ತೆಗೆದುಕೊಳ್ಳಲು, ಅವರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲು ಏನಾದರೂ ಯೋಜನೆ ಇದೆಯೇ? ಅವರಿಗೆ 2,000 ಮನೆ ಕಟ್ಟಿಕೊಡುವುದಾಗಿ ಈ ಹಿಂದೆ ಹೇಳಲಾಗಿತ್ತು. ಆದರೆ, ನಯಾಪೈಸೆ ಬಿಡುಗಡೆಯಾಗಿಲ್ಲ. ಈ ಬಾರಿ ಐದು ಸಾವಿರ ಮನೆ ಎಂದು ಹೇಳಿದ್ದೀರಾ. ತಲಾ 1.20 ಲಕ್ಷ ಅನುದಾನ ನೀಡುವುದಾಗಿ ಹೇಳಿದ್ದೀರಾ. ಈ ಅನುದಾನದ ಪ್ರಮಾಣ ಹೆಚ್ಚಳ ಮಾಡಬೇಕು. ಮೀನುಗಾರರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಯೋಜನೆ ರೂಪಿಸಬೇಕು. ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮ ಸರ್ಕಿಟ್ ಅಭಿವೃದ್ಧಿಪಡಿಸಬೇಕು. ನದಿ ಹಾಗೂ ಸಮುದ್ರದ ಬದಿಯಲ್ಲಿರುವ ಜನರ ಸಂಕಷ್ಟಗಳನ್ನು ನಿವಾರಿಸಬೇಕು.

ಯು.ಟಿ.ಖಾದರ್, ವಿಪಕ್ಷ ಉಪ ನಾಯಕ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News