ಚಲನಶೀಲತೆ ಕಳೆದುಕೊಂಡ ಪ್ರಜಾಪ್ರಭುತ್ವ: ಮಾಜಿ ಸ್ಪೀಕರ್ ರಮೇಶ್ ಕುಮಾರ್

Update: 2022-03-14 18:30 GMT

ಬೆಂಗಳೂರು, ಮಾ. 14: ‘ಶಾಸನಸಭೆ ಜನರ ಆಶೋತ್ತರಗಳ ಕನ್ನಡಿ ಆಗಬೇಕು, ಸಾಮಾನ್ಯ ಜನರ ಸಮಸ್ಯೆಗಳ ಪರಿಹಾರಕ್ಕೆ ವೇದಿಕೆಯಾಗಬೇಕು. ಆದರೆ, ನಮ್ಮ ಶಾಸನಸಭೆ ಆ ನಿಟ್ಟಿನಲ್ಲಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಿದೆ ಎಂಬುದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ' ಎಂದು ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಸಲಹೆ ಮಾಡಿದ್ದಾರೆ.

ಸೋಮವಾರ ಆಯವ್ಯಯದ ಮೇಲೆ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ವ್ಯವಸ್ಥೆ ಜಡವಲ್ಲ, ಅದಕ್ಕೆ ನಿರಂತರ ಚಲನಶೀಲತೆ ಇರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ತನ್ನ ಚಲನಶೀಲತೆ ಕಳೆದುಕೊಂಡಿದೆ. ಚುನಾವಣೆಗೆ ಮೊದಲು ಆಸ್ತಿ ಘೋಷಣೆ ಮಾಡುತ್ತೇವೆ. ಆದರೆ, ಅವಧಿ ಮುಗಿದ ಬಳಿಕ ಅದು 50 ಪಟ್ಟು, ನೂರು ಪಟ್ಟು ಜಾಸ್ತಿ ಆಗುವುದು ಹೇಗೆ? ಅದನ್ನು ಜನರಿಗೂ ಹೇಳಿಕೊಟ್ಟರೆ ಈ ಬಜೆಟ್ ಮಂಡನೆ, ಸಮಸ್ಯೆ, ಪರಿಹಾರದ ಕೆಲಸವೇ ಇರುವುದಿಲ್ಲ' ಎಂದು ಸೂಚ್ಯವಾಗಿ ವಾಸ್ತವ ಸ್ಥಿತಿಯಲ್ಲಿ ಬಿಚ್ಚಿಟ್ಟರು.

‘ಯಹೀ ಭೂಲ್ ಬಾರ್ ಬಾರ್ ಕರ್ತಾರಹಾ ಧೂಲ್ ಚೆಹರೇಪೇ ಥೀ ಮೇ ಆಯಿನಾ ಸಾಫ್ ಕರ್ತಾರಹಾ' (ನಾನು ಪದೇ ಪದೇ ಇದೇ ತಪ್ಪನ್ನು ಮಾಡುತ್ತಿದ್ದೆ, ಧೂಳು ಮುಖದ ಮೇಲಿತ್ತು. ಆದರೆ, ಕನ್ನಡಿ ಒರೆಸುತ್ತಿದ್ದೆ) ಎಂಬ ಅಲ್ಲಮಾ ಇಕ್ಬಾಲ್ ಅವರ ಶಾಯಿರಿ ಉಲ್ಲೇಖಿಸಿದ ರಮೇಶ್ ಕುಮಾರ್, ‘ಸಾಹುಕಾರ್ ಚೆನ್ನಯ್ಯ, ಬಂಟ್ವಾಳದ ಕಕ್ಕಿಲ್ಲಾಯ, ದಾವಣಗೆರೆಯ ಪಂಪಾಪತಿ, ಶಾಂತವೇರಿ ಗೋಪಾಲಗೌಡ ಅವರಂತಹ ಮಹನೀಯರಿದ್ದ ವಿಧಾನಸಭೆ ಇಂದು ಎಲ್ಲಿಗೆ ಬಂದಿದೆ' ಎಂದು ಬೇಸರ ವ್ಯಕ್ತಪಡಿಸಿದರು.

‘ದುಡಿಯುವ ವರ್ಗದ ಜನರಿಗೆ ತಮ್ಮ ಶ್ರಮದ ಪ್ರತಿಫಲದಿಂದ ಕೊಳ್ಳುವ ಶಕ್ತಿ ಬರಬೇಕು. ಆತನ ಬಳಿ ಶ್ರಮವನ್ನು ಬಿಟ್ಟರೇ ಬೇರೆ ಏನೂ ಆಸ್ತಿ ಇಲ್ಲ. ಮಾವಿನ ಹಣ್ಣಿನ ಕಾಲ ಬರುತ್ತಿದೆ. ಮಾವಿನ ಹಣ್ಣು ಎಲ್ಲರಿಗೂ ಬಹಳ ಇಷ್ಟ. ಆದರೆ, ಬಡವನಿಗೆ ತಾನು ಬಯಸಿದ್ದನ್ನು ಕೊಳ್ಳುವ ಶಕ್ತಿ ಇಲ್ಲದೆ ಹೋದರೆ ನಮ್ಮ ಸರಕಾರಿ ಯೋಜನೆಗಳು ಆತನಿಗೆ ತಲುಪುವುದು ಬಹಳ ದೂರದ ಮಾತೇ ಆಗುತ್ತದೆ' ಎಂದು ರಮೇಶ್ ಕುಮಾರ್ ತಮ್ಮದೇ ದಾಟಿಯಲ್ಲಿ ಸರಕಾರದ ವೈಫಲ್ಯಗಳನ್ನು ಬಹಿರಂಗಪಡಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News