ವಸ್ತ್ರಸಂಹಿತೆ ಇಲ್ಲದ ಸಂಸ್ಥೆಗಳಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸುವಂತ ವಸ್ತ್ರ ಧರಿಸಬಾರದು: ಹೈಕೋರ್ಟ್
ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಮುಸ್ಲಿಂ ವಿದ್ಯಾರ್ಥಿನಿಯರ ಅರ್ಜಿಯನ್ನು ವಜಾಗೊಳಿಸಿದ್ದು, ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂದು ತೀರ್ಪು ನೀಡಿದೆ.
ವಸ್ತ್ರ ಸಂಹಿತೆ ಇಲ್ಲದ ಸಂಸ್ಥೆಗಳಲ್ಲಿ ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಪಡಿಸುವಂತೆ ಹಾಗೂ ಸಮಾನತೆ ಮತ್ತು ಸಮಗ್ರತೆಗೆ ಧಕ್ಕೆ ತರುವಂತಹ ವಸ್ತ್ರ ಧರಿಸಬಾರದು ಎಂದು ಕೋರ್ಟ್ ಹೇಳಿದೆ.
ಸರ್ಕಾರಿ ಶಾಲೆಯಲ್ಲಿ ಸರ್ಕಾರ ನಿಗದಿಪಡಿಸಿರುವ ನಿಯಮ ಪಾಲಿಸಬೇಕು, ಖಾಸಗಿ ಸಂಸ್ಥೆಗಳಲ್ಲಿ ಅದರ ಆಡಳಿತ ಮಂಡಳಿ ನಿಗದಿಪಡಿಸಿದ ಹಾಗೂ ಪಿಯು ಕಾಲೇಜುಗಳಲ್ಲಿ ಪಿಯು ಶಿಕ್ಷಣ ಇಲಾಖೆ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿ ನಿಗದಿ ಪಡಿಸಿದ ಸಮವಸ್ತ್ರ ಧರಿಸಬೇಕು ಎಂದು ಕೋರ್ಟ್ ಆದೇಶಿಸಿದೆ.
ಸರಕಾರಿ ಹೈಸ್ಕೂಲ್ ಮತ್ತು ಪಿಯು ಕಾಲೇಜುಗಳಲ್ಲಿ ತರಗತಿಗಳಲ್ಲಿ ಮಾತ್ರ ಹಿಜಾಬ್ ಧರಿಸಲು ಅವಕಾಶ ಇರುವುದಿಲ್ಲ. ಶಾಲೆ-ಕಾಲೇಜುಗಳ ಆವರಣದಲ್ಲಿ ಯಾವುದೇ ನಿರ್ಬಂಧಗಳಿರುವುದಿಲ್ಲ. ಇನ್ನು ಈ ಆದೇಶ ಶಿಕ್ಷಕರಿಗೆ ಅಥವಾ ಇತರ ಸಿಬ್ಬಂದಿಗೆ ಅನ್ವಯವಾಗುವುದಿಲ್ಲ.