ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ

Update: 2022-03-15 14:57 GMT

ಬೆಂಗಳೂರು, ಮಾ. 15: ‘ರಾಜ್ಯದಲ್ಲಿನ ಕಾರಾಗೃಹಗಳು ಬಾರ್ ಗಳಾಗಿದ್ದು ಅಲ್ಲಿ ಮದ್ಯ, ಮಾದಕ ದ್ರವ್ಯ, ಮೊಬೈಲ್‍ಫೋನ್ ಸೇರಿದಂತೆ ಎಲ್ಲವೂ ಸಿಗುತ್ತದೆ. ಶಿಕ್ಷೆ ಅನುಭವಿಸಬೇಕಾದ ಕೈದಿಗಳು ಐಷಾರಾಮಿ ಜೀವನ ನಡೆಸುತ್ತಿದ್ದಾರೆ' ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಸರಕಾರದ ವಿರುದ್ಧವೇ ಆರೋಪ ಮಾಡಿದ್ದಾರೆ.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಕಾರಾಗೃಹ ಸಿಬ್ಬಂದಿ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಇದನ್ನು ತಡೆಗಟ್ಟುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ(ಕೆಎಸ್‍ಐಎಸ್‍ಎಫ್)ಯನ್ನು ಕಾರಾಗೃಹಗಳ ಭದ್ರತೆಗೆ ನಿಯೋಜನೆ ಮಾಡಬೇಕು. ವಿಜಯಪುರ ಜಿಲ್ಲೆ ಸೂಕ್ಷ್ಮ ಪ್ರದೇಶವಾಗಿದ್ದು, ಜಿಲ್ಲಾ ಕಾರಾಗೃಹದಲ್ಲಿ ಹಲವು ಕುಖ್ಯಾತ ರೌಡಿಗಳಿರುವುದರಿಂದ ಭದ್ರತೆ ಕಲ್ಪಿಸುವುದು ಅಗತ್ಯ ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಬೆಂಗಳೂರು, ಮಂಗಳೂರು, ಬಳ್ಳಾರಿ ಮತ್ತು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಗಳಿಗೆ ‘ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ'(ಕೆಎಸ್‍ಐಎಸ್‍ಎಫ್)ಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದೀಗ ಮೈಸೂರು, ಧಾರವಾಡ, ವಿಜಯಪುರ, ಕಲಬುರಗಿ ಹಾಗೂ ಶಿವಮೊಗ್ಗ ಕೇಂದ್ರ ಕಾರಾಗೃಹಗಳಿಗೂ ಕೆಎಸ್‍ಐಎಸ್‍ಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ' ಎಂದರು.

‘ಕಾರಾಗೃಹಗಳಲ್ಲಿ ಮದ್ಯ, ಮಾದಕ ದ್ರವ್ಯ, ಮೊಬೈಲ್‍ಫೋನ್ ಪತ್ತೆ ಸಂಬಂಧ ಅವುಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೈಲುಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ಕೈಗಾರಿಕಾ ಭದ್ರತಾ ಪಡೆಗಳನ್ನು ನಿಯೋಜನೆ ಬಳಿಕ ಜೈಲುಗಳ ವ್ಯವಸ್ಥೆ ಸುಧಾರಣೆಯಾಗುತ್ತಿದ್ದು, ಗೃಹ ಇಲಾಖೆ ಆ ನಿಟ್ಟಿನಲ್ಲಿ ವಿಶೇಷ ಆಸ್ಥೆ ವಹಿಸಿದೆ' ಎಂದು ಆರಗ ಜ್ಞಾನೇಂದ್ರ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News