ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು 5 ಕೋಟಿ ರೂ.ಗೆ ಹೆಚ್ಚಿಸಲು ಆಗ್ರಹ

Update: 2022-03-15 15:02 GMT

ಬೆಂಗಳೂರು, ಮಾ. 15: ‘ಕೇವಲ 2 ಕೋಟಿ ರೂ.ಗಳಷ್ಟಿರುವ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯನ್ನು 4 ಕೋಟಿ ರೂ. ಅಥವಾ 5 ಕೋಟಿ ರೂ.ಗಳಿಗೆ ಹೆಚ್ಚಿಸಬೇಕು' ಎಂದು ಜೆಡಿಎಸ್ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಆಗ್ರಹಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಆಯವ್ಯಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಮ್ಮ ಕಲ್ಯಾಣ ಕರ್ನಾಟಕ ಭಾಗ ‘ಕಲ್ಯಾಣ’ವಿಲ್ಲದ ‘ಕಲ್ಯಾಣ ಕರ್ನಾಟಕ’ ಆಗಿದೆ. ಈ ಭಾಗದ ಕೃಷಿ, ಶಿಕ್ಷಣ, ಆರೋಗ್ಯ, ನೀರಾವರಿ, ಪ್ರವಾಸೋದ್ಯದಮ ಕ್ಷೇತ್ರಗಳ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

‘ಸ್ವ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಮತ್ತು ಸೈನಿಕರ ಕುಟುಂಬಗಳಿಗೆ ಸರಕಾರದಿಂದ ಗೌರವಧನ ಹಾಗೂ ಆ ಕುಟುಂಬಗಳಿಗೆ ಜಮೀನು ಒದಗಿಸಿಕೊಡುವ ಕೆಲಸವನ್ನು ಎಲ್ಲ ಕ್ಷೇತ್ರಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಾಡಬೇಕು. ರೈತರ ಆದಾಯ ದ್ವಿಗುಣ ಮಾಡುವ ಬದಲಿಗೆ ಅವರು ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಕೊಡಿಸಬೇಕು. ಬೆಳೆ ನಷ್ಟಕ್ಕೆ ಸೂಕ್ತ ವಿಮಾ ಸೌಲಭ್ಯ ದೊರಕಿಸಿಕೊಡಲು ಮುಂದಾಗಬೇಕು' ಎಂದು ಸಲಹೆ ನೀಡಿದರು.

‘ಕುರಿ, ಮೇಕೆಗಳ ಸಾವಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತ ವೈಜ್ಞಾನಿಕವಾಗಿಲ್ಲ. ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು. ಕುರಿ, ಮೇಕೆ ಸಾಕಾಣಿಕೆದಾರರಿಗೆ ಪ್ರೋತ್ಸಾಹ ನೀಡಬೇಕು. ಸರಕಾರದಿಂದ ಕುರಿ, ಮೇಕೆಗಳಿಗೆ ವಿಮಾ ಯೋಜನೆಗಳನ್ನು ರೂಪಿಸಬೇಕು. ಅವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಕೆಲಸ ಸರಕಾರದಿಂದ ಆಗಬೇಕು. ಜೊತೆಗೆ 9 ಮತ್ತು 10ನೆ ತರಗತಿಯ ಮಕ್ಕಳಿಗೂ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಯೋಜನೆ ವಿಸ್ತರಿಸಬೇಕು' ಎಂದು ಅವರು ಆಗ್ರಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News