×
Ad

ಬೆಳಗಾವಿ: ನಿಗೂಢವಾಗಿ ಕಣ್ಮರೆಯಾಗಿದ್ದ 4.9 ಕೆಜಿ ಚಿನ್ನ ವಶಕ್ಕೆ ಸಿಐಡಿ ವಿಫಲ

Update: 2022-03-16 08:26 IST
ಸಾಂದರ್ಭಿಕ ಚಿತ್ರ

ಬೆಳಗಾವಿ: ಜಿಲ್ಲೆಯ ಯಮಕನಮರಡಿ ಪೊಲೀಸರು ಕಾರೊಂದರಿಂದ ವಶಪಡಿಸಿಕೊಂಡಿದ್ದ 4.9 ಕೆ.ಜಿ. ಚಿನ್ನ ನಿಗೂಢವಾಗಿ ಕಣ್ಮರೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಹತ್ತು ತಿಂಗಳಿಂದ ತನಿಖೆ ನಡೆಯುತ್ತಿದ್ದರೂ, ಕಣ್ಮರೆಯಾದ ಚಿನ್ನ ವಶಪಡಿಸಿಕೊಳ್ಳುವಲ್ಲಿ ಸಿಐಡಿ ಪೊಲೀಸರು ವಿಫಲರಾಗಿದ್ದಾರೆ ಎಂದು times of india ವರದಿ ಮಾಡಿದೆ. 

ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಕಿರಣ್ ವೀರನಗೌಡರ್‌ ಎಂಬಾತನನ್ನು ಬಂಧಿಸುವಲ್ಲಿ ಅಪರಾಧ ತನಿಖಾ ವಿಭಾಗ (ಸಿಐಡಿ) ಯಶಸ್ವಿಯಾಗಿದ್ದರೂ, ಇದುವರೆಗೆ ಚಿನ್ನ ವಶಪಡಿಸಿಕೊಂಡಿಲ್ಲ. 2021ರ ಮೇ 26ರಂದು ಸಿಐಡಿ, ಈ ಪ್ರಕರಣ ಸಂಬಂಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 380 (ಕಳ್ಳತನ) ಮತ್ತು ಸೆಕ್ಷನ್ 447 (ಅಕ್ರಮ ಪ್ರವೇಶ) ಅನ್ವಯ ಎಫ್‍ಐಆರ್ ದಾಖಲಿಸಿತ್ತು.

ಸಿಐಡಿಯ ಹಣಕಾಸು ಗುಪ್ತಚರ ಘಟಕ ಜೂನ್ 7ರಂದು ಎರಡನೇ ಎಫ್‍ಐಆರ್ ದಾಖಲಿಸಿತ್ತು. ವೀರನಗೌಡರ್‌ ಜೂನ್ 7ರಂದು ಬಂಧನಕ್ಕೆ ಒಳಗಾಗಿದ್ದ. ಬಳಿಕ ಆತನಿಗೆ ಜಾಮೀನು ನೀಡಲಾಗಿದ್ದು, ಮಂಪರು ಪರೀಕ್ಷೆಗೆ ಒಳಗಾಗಲು ಆತ ನಿರಾಕರಿಸಿದ್ದಾನೆ ಎನ್ನಲಾಗಿದೆ.

2021ರ ಜನವರಿ 9ರಂದು ಖಚಿತ ಮಾಹಿತಿ ಆಧರಿಸಿ ಯಮಕನಮರಡಿ ಪೊಲೀಸರು ತಿಲಕ್ ಪೂಜಾರಿ ಎಂಬಾತನ ಕಾರನ್ನು ಚಿನ್ನ ಕಳ್ಳಸಾಗಾಣೆ ಮಾಡಲು ಬಳಸಲಾಗುತ್ತಿದೆ ಎಂಬ ಶಂಕೆಯಿಂದ ತಡೆಯಲಾಯಿತು. ತಿಲಕ್ ಪೂಜಾರಿ ಮಂಗಳೂರಿನಿಂದ ಕೊಲ್ಲಾಪುರಕ್ಕೆ ಹೋಗುತ್ತಿದ್ದು, ಕಾರನ್ನು ವಶಪಡಿಸಿಕೊಳ್ಳಲಾಗಿತ್ತು. ಕಾರನ್ನು ಪೊಲೀಸ್ ಠಾಣೆಯಲ್ಲಿ ನಿಲ್ಲಿಸುವ ವೇಳೆ ಚಿನ್ನ ಕಣ್ಮರೆಯಾಗಿತ್ತು. ಕಾರನ್ನು ಮತ್ತೆ ತನ್ನ ವಶಕ್ಕೆ ಪಡೆಯುವ ವೇಳೆಗೆ ತಿಲಕ್ ಪೂಜಾರಿಗೆ ಈ ವಿಷಯ ತಿಳಿಯಿತು ಎನ್ನಲಾಗಿದೆ.

ಆ ಬಳಿಕ ವೀರನಗೌಡ ನೆರವಿನೊಂದಿಗೆ ತಿಲಕ್ ಪೂಜಾರಿ ಐಜಿಪಿ ಸುಹಾಸ್ ಬಳಿಕ ತೆರಳಿ, ಕಾರು ಮರಳಿ ನೀಡುವಂತೆ ಕೋರಿದ್ದರು. ಆ ಬಳಿಕ ಚಿನ್ನ ಕಣ್ಮರೆ ಬಗ್ಗೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿತ್ತು. ನಂತರ ಪ್ರಕರಣ ಸಿಐಡಿಗೆ ವರ್ಗಾವಣೆಯಾಯಿತು. 

ವೀರನಗೌಡರ್ ನನ್ನು ಮತ್ತು ಗೋಕಾಕ್ ಡಿವೈಎಸ್ಪಿ ಜಾವೇದ್ ಇನಾಮದಾರ ಅವರನ್ನು ಸಿಐಡಿ ಪೊಲೀಸರು ವಿಚಾರಣೆಗೆ ಗುರಿಪಡಿಸಿದೆ. ಹಲವು ತಿಂಗಳ ಕಾಲ ವೀರನಗೌಡರ್ ಕಸ್ಟಡಿಯಲ್ಲಿದ್ದ. ಆದರೂ ಕಣ್ಮರೆಯಾಗಿರುವ ಚಿನ್ನ ಮಾತ್ರ ಪತ್ತೆಯಾಗಿಲ್ಲ. ಚಿನ್ನವನ್ನು ಇನ್ನೂ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ಹೇಳಿದ್ದಾರೆ.

ವೀರನಗೌಡರ್‌ ನನ್ನು ಮಂಪರು ಪರೀಕ್ಷೆಗೆ ಒಳಪಡಿಸಿದ ಬಳಿಕ ಚಿನ್ನ ವಶಪಡಿಸಿಕೊಳ್ಳಬಹುದು ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದರು. ಆದರೆ ಈಗ ಆತ ಒಪ್ಪಿಗೆ ನೀಡುತ್ತಿಲ್ಲ ಎನ್ನುತ್ತಿದ್ದಾರೆ. ಪ್ರಕರಣದಲ್ಲಿ ಈಗ ಸಿಐಡಿಗೆ ಆಸಕ್ತಿ ಇಲ್ಲ. ಆದ್ದರಿಂದ ಚಿನ್ನ ವಶಪಡಿಸಿಕೊಳ್ಳುವ ಭರವಸೆ ಉಳಿದಿಲ್ಲ. ವೀರನಗೌಡರ್‌ ಇದೀಗ ಮುಕ್ತವಾಗಿ ಓಡಾಡುತ್ತಿದ್ದಾನೆ ಎಂದು ತಿಲಕ್ ಪೂಜಾರಿ ತಿಳಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News