ಚಿಕ್ಕಮಗಳೂರು : ಲೋಕೋಪಯೋಗಿ ಇಲಾಖೆ ಎಇಇ ಗವಿರಂಗಪ್ಪ ಮನೆ ಮೇಲೆ ಎಸಿಬಿ ದಾಳಿ
ಚಿಕ್ಕಮಗಳೂರು, ಮಾ.16: ಆದಾಯ ಮೀರಿ ಅಕ್ರಮ ಸಂಪತ್ತುಗಳಿಕೆ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ ಲೋಕೋಪಯೋಗಿ ಇಲಾಖೆ ಚಿಕ್ಕಮಗಳೂರು ವಿಭಾಗದ ಎಇಇ ಮನೆ ಮೇಲೆ ಎಸಿಬಿ ಅಧಿಕಾರಿಗಳ ತಂಡ ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ ಘಟನೆ ಬುಧವಾರ ನಡೆದಿದೆ.
ನಗರದ ಗಾಂಧಿನಗರದಲ್ಲಿರುವ ಲೋಕೋಪಯೋಗಿ ಇಲಾಖೆಯ ಚಿಕ್ಕಮಗಳೂರು ವಿಭಾಗದ ಎಇಇ ಗವಿಗಂಗಪ್ಪ ಅವರ ಮನೆ ಮೇಲೆ ಬುಧವಾರ ಬೆಳಗ್ಗೆ ದಾಳಿಸಿ ನಡೆಸಿದ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಎಸಿಬಿ ಅಧಿಕಾರಿಗಳ ತಂಡ ಜಂಟಿಯಾಗಿ ದಾಳಿ ನಡೆಸಿದ್ದು, ದಾಳಿ ವೇಳೆ ಅಕ್ರಮ ಸಂಪತ್ತಿನ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿತು ಎಂದು ತಿಳಿದು ಬಂದಿದೆ.
ಎಸಿಬಿ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಎಇಇ ಗವಿಗಂಗಪ್ಪ ಅವರ ಮನೆಯಲ್ಲಿ 100 ಗ್ರಾಂ ಚಿನ್ನದ ಗಟ್ಟಿ ಸೇರಿದಂತೆ 750 ಗ್ರಾಂ ಚಿನ್ನದ ಆಭರಣಗಳು ಹಾಗೂ 900 ಗ್ರಾಂ ಬೆಳ್ಳಿ ವಸ್ತುಗಳು, 2.74 ಲಕ್ಷ ರೂ. ನಗದು ಪತ್ತೆಯಾಗಿದ್ದು, ಈ ಸಂಬಂಧ ದಾಖಲೆ ಪತ್ರಗಳನ್ನು ಪರಿಶೀಲಿಸಿದ್ದಾರೆಂದು ತಿಳಿದು ಬಂದಿದೆ. ಅಧಿಕಾರಿಗಳ ತಂಡ ಅಧಿಕಾರಿ ಮನೆಯಲ್ಲಿ ಸುಮಾರು 2 ಗಂಟೆಗಳ ಕಾಲ ತಪಾಸಣೆ ನಡೆಸಿದ್ದು, ದಾಳಿ ಸಂಬಂಧ ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಿದೆ.