ಹಿಜಾಬ್ ತೀರ್ಪು: ತಾರತಮ್ಯವಿಲ್ಲದ ಸಾರ್ವತ್ರಿಕ ಶಿಕ್ಷಣದ ಹಕ್ಕಿಗೆ ಹೊಡೆತ; ಸಿಪಿಐಎಂ

Update: 2022-03-16 13:00 GMT

ಕಲಬುರಗಿ: ತರಗತಿಗಳಲ್ಲಿ ಹಿಜಾಬ್ ಅಥವಾ ಶಿರವಸ್ತ್ರ ಬಳಕೆಯನ್ನು ನಿಷೇಧಿಸುವ  ಕರ್ನಾಟಕ ಸರಕಾರದ ಆದೇಶವನ್ನು ಎತ್ತಿ ಹಿಡಿದಿರುವ ರಾಜ್ಯ ಉಚ್ಛ ನ್ಯಾಯಾಲಯದ ತೀರ್ಪು ದುರದೃಷ್ಠಕರವಾದುದಾಗಿದೆ. ಇದು ಜನತೆಯು ತಾರತಮ್ಯವಿಲ್ಲದೆ ಸಾರ್ವತ್ರಿಕ ಶಿಕ್ಷಣ ಪಡೆಯುವ ಹಕ್ಕಿಗೆ ಹೊಡೆತ ನೀಡಲಿದೆ ಎಂದು  ಸಿಪಿಐಎಂ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಕೆ ನೀಲಾ ತನ್ನ ಆತಂಕವನ್ನು ವ್ಯಕ್ತ ಪಡಿಸಿದ್ದಾರೆ. 

ಪ್ರಕರಣದ ಕುರಿತು ಪತ್ರಿಕಾ ಹೇಳಿಕೆ ನೀಡಿ, ಯಾವುದೇ ತಾರತಮ್ಯವಿಲ್ಲದೆ ಶಿಕ್ಷಣ ಪಡೆಯುವ ಹಕ್ಕು ಭಾರತದ ಸಂವಿಧಾನವು ಖಾತರಿಗೊಳಿಸಿರುವ ಹಕ್ಕಾಗಿದೆ. ಈ ತೀರ್ಪಿನಲ್ಲಿ , ಇದನ್ನು ಖಾತ್ರಿಗೊಳಿಸದ ಹಲವು ಪ್ರಶ್ನಾರ್ಹ ಆಯಾಮಗಳಿವೆ. ತರಗತಿಗಳಲ್ಲಿ ಹಿಜಾಬ್ ಬಳಕೆಯನ್ನು ನಿಷೇಧಿಸುವ ಕರ್ನಾಟಕ ಸರ್ಕಾರದ ದೋಷಪೂರ್ಣವೆಂದೇ ಹೇಳಬಹುದಾದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿರುವುದರ  ತಕ್ಷಣದ ಪರಿಣಾಮವೆಂದರೆ, ಇದು ರಾಜ್ಯದ ಶಿಕ್ಷಣ ಸಂಸ್ಥೆಗಳಿಂದ ಮುಸ್ಲಿಂ ಯುವತಿಯರನ್ನು ಗಣನೀಯವಾಗಿ ಹೊರದಬ್ಬುತ್ತದೆ ಎಂದು ದೂರಿದ್ದಾರೆ.

ಭಾರತದ ಹಲವು ರಾಜ್ಯಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುವ ಶಿರವಸ್ತ್ರವನ್ನು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಎಂದೂ ಕೂಡಾ, ಸಾಮಾನ್ಯ ಸಮವಸ್ತ್ರದ ನಿಯಮದ ಉಲ್ಲಂಘನೆ ಎಂದು ಪರಿಗಣಿಸಲಾಗಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ, ನೆರೆಯ ಕೇರಳ. ಅಲ್ಲಿನ ಶಾಲೆಗಳಲ್ಲಿ, ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿರುವ ದಾಖಲೆಯನ್ನು ಕಾಣಬಹುದು. ಕರ್ನಾಟಕ ಸರ್ಕಾರವು ಕೇರಳದ ರೀತಿಯಲ್ಲಿ ಕ್ರಮವಹಿಸುವುದು ಅಗತ್ಯವಿದೆ ಎಂದು ಒತ್ತಾಯಿಸಿದೆ.

ಹಿಜಾಬ್ ಧರಿಸುವುದು ಅಥವಾ ಧರಿಸದಿರುವುದನ್ನು ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದರೆ ಉತ್ತಮವಾಗಿತ್ತು. ಮತೀಯ ಆಚರಣೆಗಳನ್ನು ನಿರ್ದಿಷ್ಟ ಸಂಹಿತೆಯ ವ್ಯಾಪ್ತಿಗೆ ಒಳಪಡಿಸುವುದರಿಂದ, ನೇರವಾಗಿ ಒಂದು ಫಲಿತಾಂಶ ನೀಡಿದರೆ, ಪರೋಕ್ಷವಾಗಿ ಮತ್ತೊಂದು ಫಲಿತಾಂಶವನ್ನು ನೀಡಬಹುದು. ಇದು ದೀರ್ಘಾವಧಿಯಲ್ಲಿ ಬೇರೆ ಬೇರೆ ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಹೈಕೋರ್ಟ್ ತೀರ್ಪು ಬಂದ ನಂತರ ರಾಜ್ಯದಲ್ಲಿನ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಪ್ರತ್ಯಕ್ಷವಾಗಿಯೋ, ಅಪ್ರತ್ಯಕ್ಷವಾಗಿಯೋ ಕೋಮುವಾದಿ ಮತ್ತು ಮತಾಂಧ ಶಕ್ತಿಗಳಿಗೆ ಕುಮ್ಮಕ್ಕು ದೊರೆತಂತೆ ಭಾಸವಾಗುತ್ತದೆ. ಇದು ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಮೇಲ್ಮನವಿಗಳ ವಿಚಾರದಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯ ಕೂಡಲೇ ಮದ್ಯಪ್ರವೇಶಿಸಿ, ತಾರತಮ್ಯವಿಲ್ಲದ ಸಾರ್ವತ್ರಿಕ ಶೈಕ್ಷಣಿಕ ಹಕ್ಕನ್ನು ಖಾತರಿ ಪಡಿಸುವಂತೆ ಕ್ರಮವಹಿಸುತ್ತದೆಂದು ಸಿಪಿಐ(ಎಂ ಆಶಿಸುತ್ತದೆ.

ರಾಜ್ಯದ ಶಾಂತಿ ಸೌಹಾರ್ಧತೆ ಕಾಪಾಡಲು ಹಾಗೂ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷೆಗಳಲ್ಲಿ ಭಾಗಿಯಾಗಲು ಸಾಧ್ಯವಾಗುವಂತೆ ಅಗತ್ಯ ಕ್ರಮವಹಿಸುವಂತೆ ಪಕ್ಷದ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಮನವಿ ಮಾಡಿ, ಹೈಕೋರ್ಟ್ ತೀರ್ಪಿನಿಂದ ಅಲ್ಪಸಂಖ್ಯಾತ ಸಮುದಾಯ ಮತ್ತು ಮುಸ್ಲಿಂ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮಾತ್ರವಲ್ಲ, ಹಿಜಾಬ್ ಧರಿಸಿ ಶಾಲಾ - ಕಾಲೇಜುಗಳಿಗೆ ತೆರಳುವುದನ್ನು ಮುಂದುವರೆಸಿದ್ದಾರೆ. ರಾಜ್ಯದಾದ್ಯಂತ ಹಲವೆಡೆ ಶಾಲಾ - ಕಾಲೇಜು ಆಡಳಿತ ಮಂಡಳಿಗಳು ಅವರು ತರಗತಿಗಳಿಗೆ ಹಾಜರಾಗದಂತೆ ತಡೆಯುವುದು ಮುಂದುವರೆಯುತ್ತಿದೆ. ತೀರ್ಪು ಉಂಟು ಮಾಡಿದ ಅಸಮಾಧಾನವು ರಾಜ್ಯದ ಅಲ್ಪ ಸಂಖ್ಯಾತ ವಲಯದಲ್ಲಿ ಮೌನ ಪ್ರತಿಭಟನೆ ಹಾಗೂ ವ್ಯಾಪಾರ ವಹಿವಾಟು ನಿಲ್ಲಿಸುವ ಪ್ರತಿಭಟನೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.  

ಇದೇ ಸಂದರ್ಭದಲ್ಲಿ  ಕೆಲವು ಮತಾಂಧ ಶಕ್ತಿಗಳು ಈ ತೀರ್ಪಿನಿಂದ ಮುಸ್ಲಿಂ ವಿದ್ಯಾರ್ಥಿನಿಯರ ತಾರತಮ್ಯವಿಲ್ಲದ ಸಾರ್ವತ್ರಿಕ ಶಿಕ್ಷಣದ ಹಕ್ಕಿಗೆ ಉಂಟಾದ ಧಕ್ಕೆಯನ್ನು ಗಮನಿಸಿದೆ, ತಮಗೆ ಸಿಕ್ಕ ಜಯವೆಂಬಂತೆ ಬಿಂಬಿಸಿಕೊಳ್ಳುತ್ತಿರುವುದು ಆತಂಕದ ವಿಚಾರವಾಗಿದೆ. ಈ ಎಲ್ಲವೂ ರಾಜ್ಯದೊಳಗೆ ಮತಾಂಧತೆ ಬೆಳೆಯಲು ಮತ್ತು ಸೌಹಾರ್ಧತೆಯ ವಾತಾವರಣವನ್ನು ದುರ್ಬಲಗೊಳಿಸುವ ಅವಕಾಶಗಳನ್ನು ಹೆಚ್ಚು ಮಾಡಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ, ರಾಜ್ಯ ಸರಕಾರವು ರಾಜ್ಯದ ಶಾಂತಿ ಸೌಹಾರ್ಧತೆಗೆ ಪೂರಕವಾಗಿ ಎಲ್ಲರ ವಿಶ್ವಾಸವನ್ನು ಪಡೆಯಲು ಮತ್ತು ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ತರಗತಿಗಳ ಪರೀಕ್ಷೆಗಳಲ್ಲಿ ಪಾಲ್ಗೊಂಡು ತಮ್ಮ ಶೈಕ್ಷಣಿಕ ಹಕ್ಕನ್ನು ಪಡೆಯುವಂತೆ ಅಗತ್ಯವಾದ ವಾತಾವರಣವನ್ನು ನಿರ್ಮಿಸಲು ಕ್ರಮವಹಿಸುವಂತೆ ಒತ್ತಾಯಿಸಿದೆ. 

ಎಲ್ಲ ಮುಸ್ಲಿಂ ಬಾಂಧವರು, ಹಿರಿಯರು, ಧಾರ್ಮಿಕ ಸಂಸ್ಥೆಗಳು, ತಂದೆ, ತಾಯಿಗಳು, ಪೋಷಕರು ಒಟ್ಟಾಗಿ, ಸರ್ವೋಚ್ಛ ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತಲೇ, ಎಲ್ಲ ವಿದ್ಯಾರ್ಥಿನಿಯರು ವಿದ್ಯಾಭ್ಯಾಸದಲ್ಲಿ ತೊಡಗುವಂತೆ ಮತ್ತು ಅವರು ಪರೀಕ್ಷೆ ಬರೆದು ಶಿಕ್ಷಣವನ್ನು ಪೂರೈಸುವಂತೆ ಸೂಕ್ತ ಕ್ರಮವಹಿಸಲು ಮನವಿಯಲ್ಲಿ ಕೋರಿದೆ. 

ಮೇಲ್ಮನವಿ ಮೂಲಕ ಈ ವಿಚಾರವು ಸರ್ವೋಚ್ಛ ನ್ಯಾಯಾಲಯ ವ್ಯಾಪ್ತಿಗೆ ಸೇರಿರುವುದರಿಂದ ಅದರ ತೀರ್ಪಿಗಾಗಿ ಕಾಯುತ್ತಾ, ರಾಜ್ಯದೊಳಗೆ ಶಾಂತಿ ಹಾಗೂ ಸೌಹಾರ್ಧತೆಯನ್ನು ಬಲಗೊಳಿಸಲು ಅಗತ್ಯ ಕ್ರಮವಹಿಸುವಂತೆ, ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ) ರಾಜ್ಯ ಸಮಿತಿಯು, ರಾಜ್ಯದ ನಾಗರೀಕರು, ಅಲ್ಪ ಸಂಖ್ಯಾತರು, ಜಾತ್ಯಾತೀತ ಶಕ್ತಿಗಳು ಮತ್ತು ಸಮಸ್ಥ ವಿದ್ಯಾರ್ಥಿ ಸಮುದಾಯಗಳಲ್ಲಿ ಮನವಿ ಪ್ರಕಟಣೆಯ ಮೂಲಕ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News