×
Ad

ನಿಷೇಧಾಜ್ಞೆ ಹೇರುವ ಮೊದಲೇ ಸಾಮರಸ್ಯ ಕಾಪಾಡಲು ಆಸ್ಥೆ ವಹಿಸುವುದು ಬೇಡವೇ: ಯು.ಟಿ.ಖಾದರ್ ಪ್ರಶ್ನೆ

Update: 2022-03-16 20:03 IST

ಬೆಂಗಳೂರು, ಮಾ. 16: ‘ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನೆ ಗೃಹ ಸಚಿವರೆ ನಿಂದನೆ ಮಾಡಿದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವೇ? ದ್ವೇಷದ ಭಾಷಣಕ್ಕೆ ಕೊನೆ ಯಾವಾಗ? ಎಂದೂ ದ್ವೇಷದ ಸಾವು ಆಗಿಲ್ಲವೇ? ನಿಷೇಧಾಜ್ಞೆ, ಕರ್ಫ್ಯೂ ಹೇರುವುದು ಪರಿಹಾರವೆ? ಇಂತಹ ಪರಿಸ್ಥಿತಿ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು, ಸಾಮರಸ್ಯ ಕಾಪಾಡುವುದು, ಸರಕಾರದ ಜವಾಬ್ದಾರಿಯಲ್ಲವೇ?' ಎಂದು ಪ್ರತಿಪಕ್ಷ ಉಪನಾಯಕ ಯು.ಟಿ.ಖಾದರ್ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು’ ನಿಲುವಳಿ ಸೂಚನೆಯ ಪೂರ್ವಭಾವಿ ಪ್ರಸ್ತಾಪಿಸಿದ ಅವರು, ‘ಪೊಲೀಸ್ ಇಲಾಖೆ ಭ್ರಷ್ಟಾಚಾರ ರಹಿತ ಇಲಾಖೆಯಾಗಬೇಕು. ಆದರೆ, ಇಂದು ಪೊಲೀಸ್ ಠಾಣೆಗಳು ಜನಸ್ನೇಹಿ ಆಗುವ ಬದಲು ರಾಜಕಾರಣಿ ಸ್ನೇಹಿ ಠಾಣೆಗಳಾಗಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ' ಎಂದು ಆಕ್ಷೇಪಿಸಿದರು. 

‘ಗದಗ ಜಿಲ್ಲೆಯ ನರಗುಂದದಲ್ಲಿ ಹತ್ಯೆ, ಶಿವಮೊಗ್ಗದಲ್ಲಿ ಹತ್ಯೆ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಆತಂಕದಲ್ಲಿ ಬದುಕುವ ಸ್ಥಿತಿ ಸೃಷ್ಟಿಯಾಗಿದೆ. ಕಾನೂನು ಸುವ್ಯವಸ್ಥೆ ಸರಿಯಾಗಿದ್ದರೆ ಮಾತ್ರವೇ ರಾಜ್ಯದ ಅಭಿವೃದ್ಧಿ ಸಾಧ್ಯ. ಎಲ್ಲ ವರ್ಗದ ಜನರೂ ನಿರ್ಭೀತಿಯಿಂದ ಬದುಕುವಂತಹ ವಾತಾವರಣ ಕಲ್ಪಿಸಬೇಕಾಗಿರುವುದು ಸರಕಾರದ ಹೊಣೆಗಾರಿಕೆ' ಎಂದು ಯು.ಟಿ.ಖಾದರ್ ಪ್ರತಿಪಾದಿಸಿದರು.

ಇದಕ್ಕೆ ಆಕ್ಷೇಪಿಸಿದ ಕಾನೂನು ಸಚಿವ ಮಾಧುಸ್ವಾಮಿ, ‘ನಿಲುವಳಿ ಸೂಚನೆಯಡಿ ಈ ವಿಷಯ ಪ್ರಸ್ತಾಪಕ್ಕೆ ಅವಕಾಶವಿದೆಯೇ? ಮನಸೋ ಇಚ್ಛೆ ತಮಗೆ ಖುಷಿ ಬಂದ ವಿಚಾರಗಳನ್ನು ಶಾಸನಸಭೆಯ ನಿಯಮಗಳನ್ನು ಬಿಟ್ಟು ಮಂಡಿಸಲು ಅವಕಾಶವಿದೆಯೇ? ಸ್ಪೀಕರ್ ಅವರು ಸೂಕ್ತ ರೀತಿಯಲ್ಲಿ ಇಂತಹ ಸೂಚನೆಗಳ ಬಗ್ಗೆ ಪರಿಶೀಲನೆ ವೇಳೆಯೆ ತೀರ್ಮಾನ ಮಾಡಬೇಕು. ಹೀಗಾದರೆ ಸರಕಾರಕ್ಕೆ ಕಷ್ಟವಾಗಲಿದೆ' ಎಂದು ಗಮನ ಸೆಳೆದರು.

‘ನಿಲುವಳಿ ಸೂಚನೆಯಡಿ ನಿರ್ದಿಷ್ಟ ವಿಚಾರ, ತುರ್ತು ಸಂಗತಿಗಳನ್ನಷ್ಟೇ ಪ್ರಸ್ತಾಪಿಸಬೇಕು ಎಂಬ ನಿಯಮವಿದೆ. ಆದರೆ, ಉಪ ನಾಯಕ ಖಾದರ್ ಅವರು ಆಯವ್ಯಯದ ಮೇಲಿನ ಚರ್ಚೆ ಸಂದರ್ಭದಲ್ಲೇ ಪ್ರಸ್ತಾಪಿಸಿದ ವಿಚಾರಗಳನ್ನೇ ಇಲ್ಲಿಯೂ ಚರ್ಚೆ ಮಾಡಿದರೆ ನಿಯಮಗಳಿಗೆ ಗೌರವ ಬರಲಿದೆಯೇ? ಎಲ್ಲ ಸಮಯದಲ್ಲಿ ಬ್ರಹ್ಮಾಸ್ತ್ರವನ್ನೇ ಬಿಡಲು ಸಾಧ್ಯವೇ?' ಎಂದು ಮಾಧುಸ್ವಾಮಿ ಹೇಳಿದರು.

ಇದರಿಂದ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಸದಸ್ಯರನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಮಾಧಾನಪಡಿಸಿ, ನಿಲುವಳಿ ಪೂರ್ವಭಾವಿ ಪ್ರಸ್ತಾಪಕ್ಕೆ ಅವಕಾಶ ನೀಡಲಾಗಿದೆ. ಪರಿಶೀಲನೆ ಹಂತದಲ್ಲೆ ಇದರ ನಿರ್ಧಾರ ಮಾಡಬೇಕಿತ್ತು ಎಂಬುದು ಸಚಿವರ ಅಭಿಪ್ರಾಯ. ಕಲಾಪ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಿ ಬಿಟ್ಟಿವೆ. ಅದರಂತೆ ನಡೆದು ಕೊಳ್ಳಲಾಗುವುದು' ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ‘ನಿಯಮಾನುಸಾರ ಸದನ ನಡೆಸುವುದು ನಿಮ್ಮ ಜವಾಬ್ದಾರಿ. ಎಲ್ಲ ವಿಷಯಗಳಿಗೂ ‘ನಿಲುವಳಿ ಸೂಚನೆ' ಬ್ರಹ್ಮಾಸ್ತ್ರ ಆಗುವುದಿಲ್ಲ. ಬೇರೆ ನಿಯಮಗಳಡಿ ವಿಷಯ ಪ್ರಸ್ತಾಪಿಸಲಿ' ಎಂದರು. ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ‘ನಿಲುವಳಿ ಸೂಚನೆ ಪ್ರಸ್ತಾವನೆ ಬಗ್ಗೆ ಸ್ಪೀಕರ್ ಕಚೇರಿಯಲ್ಲೇ ಪರಿಶೀಲಿಸಿ ತಿಳಿಸಬೇಕು. ನಿಯಮಗಳ ಪಾಲನೆ ವಿಚಾರದಲ್ಲಿ ಹಿತ-ಅಹಿತ ಇರಬಾರದು. ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು' ಎಂದು ಸಲಹೆ ಮಾಡಿದರು. ಇದೇ ರೀತಿ ಮುಂದುವರೆದರೆ ನಾವೇ(ಆಡಳಿತ ಪಕ್ಷ) ಸಭಾತ್ಯಾಗ ಮಾಡಬೇಕಾಗುತ್ತದೆ' ಎಂದು ಮಾಧುಸ್ವಾಮಿ ಹೇಳಿದರು.

ಆಗ ಸ್ಪೀಕರ್ ನಿಲುವಳಿ ಸೂಚನೆಯಡಿ ಈ ವಿಚಾರದ ಚರ್ಚೆಗೆ ಅವಕಾಶವಿಲ್ಲ. ಬೇರೆ ರೂಪದಲ್ಲಿ ನೋಟಿಸ್ ನೀಡಿದರೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ರೂಲಿಂಗ್ ನೀಡಲು ಮುಂದಾದರು. ಇದಕ್ಕೇ ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯ ಪ್ರಿಯಾಂಕ್ ಖರ್ಗೆ, ‘ಇದು ನಿಮ್ಮ ತೀರ್ಮಾನವೋ ಅಥವಾ ಸರಕಾರದ ನಿರ್ಧಾರವೋ' ಎಂದು ಪ್ರಶ್ನಿಸಿದರು. ಇದರಿಂದ ಗದ್ದಲ ಉಂಟಾಯಿತು.

ಚರ್ಚೆಗೆ ಸರಕಾರ ಸಿದ್ಧ: ಕೂಡಲೇ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ರಾಜ್ಯದ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಚರ್ಚೆ ನಡೆಸಲು ಸರಕಾರ ಸಿದ್ಧವಿದೆ, ವಿಪಕ್ಷ ಸದಸ್ಯರು ಏನೇ ಪ್ರಶ್ನಿಸಿದರೂ ಉತ್ತರ ನೀಡಲು ನಾವು ತಯಾರಿದ್ದೇವೆ. ವಿವಾದಾತ್ಮಕ ವಿಚಾರಗಳ ಬಗ್ಗೆ ಕೋರ್ಟ್ ಆದೇಶಗಳು ಹಲವು ಬಾರಿ ಬಂದಾಗಲು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಿದೆ' ಎಂದು ಸಮರ್ಥಿಸಿದರು.

‘ಎಲ್ಲರೂ ತಮ್ಮ ಜವಾಬ್ದಾರಿ, ನಿಯಂತ್ರಣ ಇಟ್ಟುಕೊಂಡು ಯಾವುದೇ ರೀತಿಯಲ್ಲಿಯೂ ಪ್ರಚೋದನೆ ಆಗದಂತೆ ಮಾತನಾಡಬೇಕು. ಕಾನೂನು ಸುವ್ಯವಸ್ಥೆ ವಿಚಾರದ ಚರ್ಚೆಯಿಂದ ಸರಕಾರ ಹಿಂದೆ ಸರಿಯುವುದಿಲ್ಲ. ಬೇರೆ ಪಕ್ಷಗಳ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಏನೇನು ನಡೆದಿದೆ ಎಂದು ನಮಗೆ ಅರಿವಿದೆ' ಎಂದು ಬೊಮ್ಮಾಯಿ ಪ್ರತಿಕ್ರಿಯಿಸಿದರು. ಆ ಬಳಿಕ ಸ್ಪೀಕರ್ ಕಾನೂನು ಸುವ್ಯವಸ್ಥೆ ವಿಚಾರಕ್ಕೆ ಸಂಬಂಧಿಸಿದಂತೆ ನಿಯಮ 69ರಡಿಯಲ್ಲಿ ಚರ್ಚೆಗೆ ಅವಕಾಶ ನೀಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಈ ಚರ್ಚೆಗೆ ಅಂತ್ಯ ಹಾಡಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News