ಪಶು ಸಂಜೀವಿನಿ ಯೋಜನೆಯಡಿ 275 ಸುಸಜ್ಜಿತ ಆಂಬ್ಯುಲೆನ್ಸ್ ಖರೀದಿ: ಸಚಿವ ಪ್ರಭು ಚೌವ್ಹಾಣ್
ಬೆಂಗಳೂರು, ಮಾ.15: ರಾಜ್ಯ ವ್ಯಾಪಿ ಜಾನುವಾರುಗಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪಶು ಸಂಜೀವಿನಿ ಯೋಜನೆಯಡಿ 275 ಸುಸಜ್ಜಿತ ಆಂಬ್ಯುಲೆನ್ಸ್‍ಗಳನ್ನು ಖರೀದಿಸಲು ಸರಕಾರ ಮುಂದಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ತಿಳಿಸಿದರು.
ಬುಧವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಜಾನುವಾರುಗಳ ಆರೋಗ್ಯ ಮತ್ತು ರೋಗ ನಿಯಂತ್ರಣ ಯೋಜನೆಯಡಿ ಪ್ರತಿ 1 ಲಕ್ಷ ಜಾನುವಾರುಗಳಿಗೆ ಒಂದರಂತೆ 275 ಸುಸಜ್ಜಿತ ಪಶು ಚಿಕಿತ್ಸಾ ವಾಹನಗಳಿಗೆ ಈ ತಿಂಗಳಲ್ಲೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.
ಈಗಾಗಲೇ 15 ಜಿಲ್ಲೆಗಳಲ್ಲಿ ಆಂಬ್ಯುಲೆನ್ಸ್‍ಗಳು ಕಾರ್ಯನಿರ್ವಹಿಸುತ್ತಿವೆ. ಜತೆಗೆ ಪಾಲಿ ಕ್ಲಿನಿಕ್ ಸಂಸ್ಥೆಗಳಿಗೆ ಅವುಗಳನ್ನು ಒದಗಿಸಲಾಗಿದೆ. ಬೀದರ್, ರಾಯಚೂರು, ಕಲಬುರ್ಗಿ, ಯಾದಗಿರಿ, ಧಾರವಾಡ, ವಿಜಯಪುರ, ಬೆಳಗಾವಿ, ದಕ್ಷಿಣಕನ್ನಡ, ಹಾಸನ, ಮಂಡ್ಯ, ಮೈಸೂರು, ಶಿವಮೊಗ್ಗ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಈ ಆಂಬ್ಯುಲೆನ್ಸ್‍ಗಳು ಕಾರ್ಯನಿರ್ವಹಿಸುತ್ತಿವೆ ಎಂದರು.