ವಿವಾದಾತ್ಮಕ ಹೇಳಿಕೆ ಪ್ರಕರಣ: ಕಾಂಗ್ರೆಸ್ ಮುಖಂಡ ಮುಕ್ರಂ ಖಾನ್ ಗೆ ಕೋರ್ಟ್‍ನಿಂದ ಜಾಮೀನು
ಬೆಂಗಳೂರು, ಮಾ.16: ವಿವಾದಾತ್ಮಕ ಹೇಳಿಕೆ ನೀಡಿರುವ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಕಾಂಗ್ರೆಸ್ ಮುಖಂಡ ಮುಕ್ರಂಖಾನ್‍ಗೆ ಕಲಬುರಗಿ ಜಿಲ್ಲೆ ಸೇಡಂ ಪಟ್ಟಣದ ಸಿವಿಲ್ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಫೆ.8ರಂದು ಆಯೋಜಿಸಿದ್ದ ಹಿಜಾಬ್ ಪರ ಪ್ರತಿಭಟನೆಯಲ್ಲಿ ಮುಕ್ರಂಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮುಂದೆ ಇಂತಹ ಯಾವುದೇ ಹೇಳಿಕೆ ನೀಡದಂತೆ ಎಚ್ಚರಿಕೆ ನೀಡಿ ಸಿವಿಲ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಇದೇ ರೀತಿಯಾಗಿ ಮುಂದೆ ಹೇಳಿಕೆ ನೀಡಿದರೆ ನಿಮ್ಮ ವಿರುದ್ಧ ರೌಡಿಶೀಟರ್ ಕೇಸ್ ದಾಖಲಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ. ಹಿಜಾಬ್ ತಂಟೆಗೆ ಬಂದರೆ ತುಕ್ಡೆ ತುಕ್ಡೆ ಮಾಡಿಬಿಡುತ್ತಿವಿ ಎಂದು ಮುಕ್ರಂಖಾನ್, ಸೇಡಂ ಪಟ್ಟಣದಲ್ಲಿ ಹೇಳಿಕೆ ನೀಡಿದ್ದರು. ಹೀಗಾಗಿ, ಮುಕ್ರಂಖಾನ್ ವಿರುದ್ಧ ಫೆ.16ರಂದು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ನಂತರ ತಲೆಮರಿಸಿಕೊಂಡಿದ್ದ ಮುಕ್ರಂಖಾನ್, ಅಜ್ಞಾತ ಸ್ಥಳದಿಂದ ಜಾಮೀನುಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಜಾಮೀನು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಕಲಬುರಗಿ 4ನೆ ಹೆಚ್ಚುವರಿ ಕೋರ್ಟ್‍ನ ನ್ಯಾಯಪೀಠ, ಮುಕ್ರಂಖಾನ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.