ಸಾರಿಗೆ ಇಲಾಖೆಯ 30 ಸೇವೆಗಳು ಆನ್‍ಲೈನ್‍ನಲ್ಲೇ ಲಭ್ಯ: ಸಚಿವ ಶ್ರೀರಾಮುಲು
ಬೆಂಗಳೂರು, ಮಾ.16: ‘ಸಾರಿಗೆ ಇಲಾಖೆ ವತಿಯಿಂದ ಪರವಾನಿಗೆ, ವಾಹನ ನೋಂದಣಿ ಸೇರಿದಂತೆ ಒಟ್ಟು 30 ಸೇವೆಗಳನ್ನು ಸಾರ್ವಜನಿಕರಿಗೆ ಆನ್‍ಲೈನ್ ಮೂಲಕವೇ ಒದಗಿಸಲಾಗುತ್ತದೆ. ಆದರೆ, ಸದ್ಯಕ್ಕೆ ಆರ್‍ಟಿಒ ಮತ್ತು ಎಆರ್‍ಟಿಒ ಕಚೇರಿಗಳನ್ನು ಮುಚ್ಚುವ ಯಾವುದೇ ಪ್ರಸ್ತಾವನೆ ಸರಕಾರದ ಮುಂದಿಲ್ಲ' ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಸೋಮನಗೌಡ ಬಿ.ಪಾಟೀಲ್ ಅವರ ಪರವಾಗಿ ಶಿವರಾಜ್ ಪಾಟೀಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಚಾಲನಾ ಪರವಾನಿಗೆ, ವಾಹನಗಳ ನೋಂದಣಿ ಸೇರಿದಂತೆ 30 ಸೇವೆಗಳನ್ನು ಆನ್‍ಲೈನ್ ಮೂಲಕ ಒದಗಿಸುತ್ತಿದ್ದೇವೆ. ಆದರೂ, ರಾಜ್ಯದಲ್ಲಿ ಆರ್‍ಟಿಒ, ಎಆರ್‍ಟಿಒ ಕಚೇರಿಗಳನ್ನು ಮುಚ್ಚುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದರು.
‘ಯಾವುದೇ ಭಾಗದಲ್ಲಿ ಆರ್‍ಟಿಒ ಮತ್ತು ಎಆರ್‍ಟಿಒ ಕಚೇರಿ ತೆರೆಯಬೇಕಾದರೆ ಕೆಲವೊಂದು ಮಾನದಂಡಗಳು ಇರಬೇಕು. ಜನಸಂಖ್ಯೆ, ದೈನಂದಿನ ವಹಿವಾಟು ಇವೆಲ್ಲವನ್ನೂ ನೋಡಿಕೊಂಡು ಅಗತ್ಯವಿದ್ದರೆ ಆರ್‍ಟಿಒ ಮತ್ತು ಎಆರ್‍ಟಿಒ ಕಚೇರಿಗಳನ್ನು ತೆರೆಯುತ್ತೇವೆ. ವಿಜಯಪುರ ಜಿಲ್ಲೆಯಲ್ಲಿ ನೂತನವಾಗಿ ರಚನೆಯಾದ ದೇವರಹಿಪ್ಪರಗಿ ತಾಲೂಕಿನಲ್ಲಿ ಉಪ ಸಾರಿಗೆ ಅಧಿಕಾರಿಗಳ ಕಚೇರಿ ತೆರೆಯುವ ಪ್ರಸ್ತಾವನೆ ಸರಕಾರದ ಮುಂದಿಲ್ಲ' ಎಂದು ಅವರು ಸ್ಪಷ್ಟಪಡಿಸಿದರು.
‘ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಲ್ಲಿ ಪ್ರತಿ ತಿಂಗಳ ಮೊದಲ ವಾರದಲ್ಲಿ ಜಾಗೃತಿ ಶಿಬಿರವನ್ನು ಆಯೋಜಿಸುತ್ತಿದ್ದೇವೆ. ಆಗ ಆರ್‍ಟಿಒ ಕಚೇರಿಯಿಂದ ಆಗಬೇಕಾದ ಎಲ್ಲ ಸೇವೆಗಳನ್ನು ಎಆರ್‍ಟಿಒದಲ್ಲಿ ಲಭ್ಯವಾಗಲಿದೆ ಎಂದು ತಿಳಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್‍ನ ಶಿವಾನಂದ ಪಾಟೀಲ್ ಮತ್ತು ಬಿಜೆಪಿಯ ಎ.ಎಸ್.ನಡಹಳ್ಳಿ, ‘ಈ ಹಿಂದೆ ಸಾರಿಗೆ ಸಚಿವರಾಗಿದ್ದ ಲಕ್ಷ್ಮಣ್ ಸವದಿ ದೇವರಹಿಪ್ಪರಗಿಯಲ್ಲಿ ಎಆರ್‍ಟಿಒ ಕಚೇರಿ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಈಗ ಸಚಿವರು ನಮ್ಮ ಮುಂದೆ ಪ್ರಸ್ತಾವನೆ ಇಲ್ಲ ಎಂದರೆ ಹಿಂದೆ ನೀಡಿದ ಹೇಳಿಕೆಗೆ ಬೆಲೆ ಇಲ್ಲವೇ?' ಎಂದು ಪ್ರಶ್ನಿಸಿದರು.
ಬಳಿಕ ಉತ್ತರಿಸಿದ ಶ್ರೀರಾಮುಲು, ‘ದೇವರಹಿಪ್ಪರಗಿ ಪಟ್ಟಣ ಮತ್ತು ಸಿಂಧಗಿ ಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಪ್ರತಿ ತಿಂಗಳ ಕೊನೆಯವಾರದಲ್ಲಿ ಒಂದು ದಿನ ಜಾಗೃತಿ ಶಿಬಿರವನ್ನು ಆಯೋಜಿಸಲಾಗುವುದು. ಆದರೆ, ದೇವರಹಿಪ್ಪರಗಿಯಲ್ಲಿ ಉಪ ಸಾರಿಗೆ ಅಧಿಕಾರಿಗಳ ಕಚೇರಿ ಪ್ರಾರಂಭಿಸುವ ಪ್ರಸ್ತಾವನೆ ಸರಕಾರ ಮುಂದಿಲ್ಲ' ಎಂದು ಸ್ಪಷ್ಟಪಡಿಸಿದರು.
ನಿಲ್ದಾಣಗಳ ಸ್ವಚ್ಛತೆಗೆ ಆದ್ಯತೆ: ‘ಬಾಗಲಕೋಟೆ ಜಿಲ್ಲೆ ತೆರೆದಾಳ ತಾಲೂಕಿನ ರಬಕವಿ ಮತ್ತು ಬನಹಟ್ಟಿ ಪಟ್ಟಣಗಳಲ್ಲಿ ಪ್ರಸ್ತಕ ವರ್ಷ ತಲಾ 75 ಲಕ್ಷ ರೂ. ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಮಾಡುತ್ತೇವೆ. ಅಲ್ಲದೆ, ಬಸ್ ನಿಲ್ದಾಣಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ಸಚಿವ ಶ್ರೀರಾಮುಲು, ಬಿಜೆಪಿ ಸದಸ್ಯ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು.