ಕೊರಿಯಾದಲ್ಲಿ ಒಮೈಕ್ರಾನ್ ಅಬ್ಬರ: ಒಂದೇ ದಿನ ನಾಲ್ಕು ಲಕ್ಷ ಮಂದಿಯಲ್ಲಿ ಸೋಂಕು

Update: 2022-03-17 01:38 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭಾರತದಲ್ಲಿ ಒಮೈಕ್ರಾನ್ ಪ್ರಬೇಧದ ಕೋವಿಡ್-19 ಸೋಂಕು ಗಣನೀಯವಾಗಿ ಇಳಿಕೆಯಾಗಿದ್ದರೂ, ಏಷ್ಯಾ ಹಾಗೂ ಯೂರೋಪ್‍ನ ಹಲವು ದೇಶಗಳಲ್ಲಿ ಸಾಂಕ್ರಾಮಿಕ ವ್ಯಾಪಕವಾಗಿ ಹರಡುತ್ತಿದೆ. ಲಸಿಕೆ ಪಡೆಯದ ಜನರಲ್ಲಿ ಈ ಸೋಂಕು ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ.

ಕೊರಿಯಾದಲ್ಲಿ ಅತ್ಯಂತ ಆತಂಕಕಾರಿ ಪ್ರಮಾಣದಲ್ಲಿ ಸೋಂಕು ಏರಿಕೆಯಾಗುತ್ತಿದ್ದು, ಈ ತಿಂಗಳ 15ರಂದು ದೈನಿಕ ಪ್ರಕರಣಗಳ ಸಂಖ್ಯೆ 4 ಲಕ್ಷ ದಾಟಿದೆ. ಇದು ದೇಶಕ್ಕೆ ಅತಿದೊಡ್ಡ ಸವಾಲು ಎಂದು ಹಿರಿಯ ಆರೋಗ್ಯ ಅಧಿಕಾರಿ ಸೋನ್ ಯಂಗ್ ರೇ ಹೇಳಿದ್ದಾರೆ.

ಕಳೆದ ಏಳು ದಿನಗಳಲ್ಲಿ ಅತಿಹೆಚ್ಚು ಪ್ರಕರಣಗಳು ದಾಖಲಾದ ದೇಶಗಳ ಪೈಕಿ ದಕ್ಷಿಣ ಕೊರಿಯಾ ಅಗ್ರಸ್ಥಾನಿಯಾಗಿದೆ. ವಿಯೇಟ್ನಾಂನಲ್ಲಿ ಎರಡನೇ ಗರಿಷ್ಠ ಪ್ರಕರಣಗಳು ವರದಿಯಾಗಿವೆ.

ವಿಯೇಟ್ನಾಂನಲ್ಲಿ ನಾಲ್ಕು ದಿನಗಳಿಂದ ದೈನಿಕ ಪ್ರಕರಣ 2 ಲಕ್ಷ ಇದ್ದುದು, ಮಂಗಳವಾರ 2.5 ಲಕ್ಷದ ಗಡಿ ದಾಟಿದೆ. ಜನವರಿಯಿಂದೀಚೆಗೆ ಇದ್ದ ಇಳಿಕೆ ಪ್ರವೃತ್ತಿ ಕಳೆದ ಒಂದು ವಾರದಲ್ಲಿ ವ್ಯತಿರಿಕ್ತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕಳೆದ ಒಂದು ವಾರದಲ್ಲಿ 11 ದಶಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದು, 43 ಸಾವಿರ ಸೋಂಕಿತರು ಜೀವ ಕಳೆದುಕೊಂಡಿದ್ದಾರೆ.

ದಕ್ಷಿಣ ಕೊರಿಯಾದಿಂದ ಜರ್ಮನಿವರೆಗೂ ದೈನಿಕ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಆರಂಕಿಯಲ್ಲಿ ಮುಂದುವರಿದಿದೆ. ಇದರಿಂದಾಗಿ ಕೋವಿಡ್‍ ಪೂರ್ವ ಸಹಜ ಸ್ಥಿತಿಗೆ ವಿಶ್ವ ಮರಳುತ್ತದೆ ಎಂಬ ನಿರೀಕ್ಷೆ ಸದ್ಯಕ್ಕೆ ಸಾಕಾರಗೊಳ್ಳುವ ಸಾಧ್ಯತೆ ಇಲ್ಲ.

ಏಷ್ಯಾ ಹಾಗೂ ಯೂರೋಪ್‍ನಲ್ಲಿ ಪ್ರಕರಣಗಳ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಟ್ಟೆಚ್ಚರ ವಹಿಸಿದೆ. ಪರಿಸ್ಥಿತಿಯ ಬಗ್ಗೆ ಹೆಚ್ಚಿನ ನಿಗಾ ವಹಿಸಿ, ಸಮೀಕ್ಷೆಯನ್ನು ತೀವ್ರಗೊಳಿಸುವಂತೆ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News