×
Ad

ಹೆಣ್ಣಿನ ಆತ್ಮಸ್ಥೈರ್ಯ ಕುಗ್ಗಿಸುವ ಶಕ್ತಿಗಳಿಂದ ರಕ್ಷಿಸಲು ಸಾಹಿತ್ಯ ಪರಿಹಾರ ಸೂಚಿಸಬೇಕು: ಡಾ.ಸಿ.ಎಂ.ಸುಲೋಚನಾ

Update: 2022-03-18 00:06 IST

ಚಿಕ್ಕಮಗಳೂರು: ಮಹಿಳೆ ತನ್ನ ಶ್ರಮದ ಫಲದಿಂದ ಬಹಳ ಎತ್ತರಕ್ಕೇರುತ್ತಿದ್ದಾಳೆ. ಆದರೆ ಅವಳ ಆತ್ಮಸ್ಥೈರ್ಯ ಕುಗ್ಗಿಸಲು ಗೋಚರ-ಅಗೋಚರ ಪ್ರಹಾರಗಳು ನಡೆಯುತ್ತಿವೆ. ಇದರಿಂದ ಆಕೆಯನ್ನು ರಕ್ಷಿಸುವ ಪರಿಹರೋಪಾಯವನ್ನು ಸಾಹಿತ್ಯ ಆಕೆಗೆ ಸೂಚಿಸಬೇಕಾಗಿದೆ ಎಂದು ಸಾಹಿತಿ ಹಾಗೂ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಡಾ.ಸಿ.ಎಂ.ಸುಲೋಚನಾ ಅಭಿಪ್ರಾಯಪಟ್ಟರು.

ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದ ಜಗದ್ಗುರು ರಂಭಾಪುರಿ ಪೀಠದ ಆವರಣದಲಿ ಗುರುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲೆಯ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಶಾಲಾ ಇತಿಹಾಸದ ಪುಟಗಳಲ್ಲಿ ವಿದೇಶಿ ಆಕ್ರಮಣಕಾರರೇ ವಿಜೃಂಭಿಸಿದ್ದಾರೆ. ಸ್ವದೇಶಿಯರ ಅದರಲ್ಲೂ ವಿಶೇಷವಾಗಿ ಮಹಿಳೆಯರ ಸಾಹಸ ಸಾಧನೆಗಳು ನೇಪಥ್ಯಕ್ಕೆ ಸರಿದಿವೆ. ಆದರ್ಶಪ್ರಾಯವಾದ ಪ್ರಾಚೀನ ಕಾಲದ ಮಹಿಳೆಯರ ಉದಾತ್ತಚರಿತ್ರೆ ಮುಂದಿನ ಪೀಳಿಗೆಗೆ ಬೆಳಕಾಗಬಲ್ಲದು ಎಂದರು.

ಸಾಕ್ಷರತೆಗೂ ಸಾಹಿತ್ಯಕ್ಕೂ ನಿಕಟ ಸಂಬಂಧವಿದ್ದು, ಸಾಕ್ಷರತೆ ದೇಶದ ಪ್ರಗತಿಯ ಸಂಕೇತ. ಸಾಹಿತ್ಯಾಭಿಲಾಷೆ ಮಾನವನ ಸಾಂಸ್ಕೃತಿಕ ಪ್ರಗತಿಯ ಸಂಕೇತ. ವಿಶ್ವಸಂಸ್ಥೆ ದೇಶದ ಅಭಿವೃದ್ಧಿಯ ಮಾಪನದಲ್ಲಿ ಉತ್ತಮ ಪರಿಸರ, ಸ್ತ್ರೀಯರ ಸಾಕ್ಷರತಾ ಮಟ್ಟ, ಸ್ತ್ರೀಯರ ಸ್ಥಾನಮಾನ, ಶಿಶು ಮರಣದರ ಮೊದಲಾದ ಅಂಶಗಳನ್ನು ಪರಿಗಣಿಸಿದೆ. ಈ ಹಿನ್ನೆಲೆಯಿಂದ ಜಿಲ್ಲೆಯ ಸ್ತ್ರೀ ಸ್ಥಾನಮಾನ ಸಮಾಧಾನಕರವಾಗಿ ತೋರುತ್ತದೆ ಎಂದ ಅವರು, ಆಧುನೀಕತೆಯ ರಭಸ ಪ್ರಾಚೀನ ಸಂಸ್ಕೃತಿ-ಸಂಸ್ಕಾರಗಳನ್ನು ಬುಡಮೇಲು ಮಾಡುತ್ತಿದೆ. ನಾವಿಂದು ವೇದಯುಗದಿಂದ ವೇಗಯುಗಕ್ಕೆ ತಲುಪಿದ್ದೇವೆ. ಹಣ ಗಳಿಕೆಯ ಹಣಾಹಣಿಯಲ್ಲಿ ಸ್ತ್ರೀ-ಪುರುಷರು ನಿರತರಾಗಿದ್ದಾರೆ. ಅರೋಗ್ಯ ಆಯುಷ್ಯಗಳನ್ನು ಕೊಳ್ಳಲು ಹಣದಿಂದ ಸಾಧ್ಯವಿಲ್ಲವೆಂದು ಕಳೆದೆರಡು ವರ್ಷಗಳ ಅನುಭವ ಸ್ಪಷ್ಟಪಡಿಸಿದೆ ಎಂದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವೆ ಹಾಗೂ ಚಲನಚಿತ್ರ ನಟಿ ಉಮಾಶ್ರೀ, ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ಇದ್ದಾಳೆ. ಪ್ರಕೃತಿಯೇ ಹೆಣ್ಣಾಗಿದ್ದು, ಪ್ರಕೃತಿಯನ್ನು ಪ್ರೀತಿಸಬೇಕು. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮಹತ್ವದ ಹಾಗೂ ಪೂಜ್ಯ ಸ್ಥಾನವನ್ನು ನೀಡಲಾಗಿದ್ದು, ಮೊದಲು ಪೂಜಿಸುವುದು ತಾಯಿಯನ್ನೇ ಎಂದ ಅವರು, ದೇಶವನ್ನು ಕಟ್ಟಲು ಸಶಕ್ತಳಾಗಿರುವ ಹೆಣ್ಣನ್ನು ಸಮಾನತೆಯಿಂದ ಕಂಡು ಅವಳ ಕೈಹಿಡಿದು ನಡೆಸುವಂಥ ಕೆಲಸ ಆಗಬೇಕು. ಸಾಧನೆಗಳನ್ನು ಮಾಡಲು ಸಮಾನ ಅವಕಾಶಗಳನ್ನು ನೀಡಬೇಕು. ಧೈರ್ಯ ಹಾಗೂ ಅತ್ಮಸ್ಥೈರ್ಯಗಳು ಮಹಿಳೆಯರಲ್ಲಿಯೂ ಇರುತ್ತದೆ. ತಾನು ಶ್ರೀಮಂತೆ ಎನ್ನುವ ಪ್ರತಿಷ್ಠೆ ಹಾಗೂ ಕಡುಬಡವೆ ಎನ್ನುವ ಸಂಕುಚಿತ ಭಾವನೆಯನ್ನು ಕಿತ್ತೊಗೆದು ಆತ್ಮಸ್ಥೈರ್ಯದಿಂದ ಮುನ್ನುಗ್ಗಿದಾಗ ಸಾಧನೆ ಮಾಡಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ಕೆ.ಪಿ.ಸಿ.ಸಿ. ಅಧ್ಯಕ್ಷ, ಡಿ.ಕೆ.ಶಿವಕುಮಾರ್ ಮಾತನಾಡಿ, ಹೆಣ್ಣು ಮೊದಲ ಗುರು. ಹೆಣ್ಣಿಗೆ ನಮ್ಮ ಸಂಸ್ಕೃತಿಯಲ್ಲಿ ಮಹತ್ವದ ಪಾತ್ರವಿದ್ದು, ಅದು ಮುಂದುವರಿದುಕೊಂಡು ಹೋಗುವಂತೆ ನೋಡಿಕೊಳ್ಳಬೇಕು. ಹೆಣ್ಣು ಮಕ್ಕಳಿಗೆ ಶಿಕ್ಷಣ, ಜ್ಞಾನ, ಅವಕಾಶ ನೀಡಿದಾಗ ಮಾತ್ರ ಸಮಾಜ, ಸಂಸಾರ ಮನ್ನಡೆಯಲು ಸಾಧ್ಯ ಎಂದರು.

ರಂಭಾಪುರಿ ಮಠದ ವೀರಸಿಂಹಾಸನಾಧೀಶ್ವರ 1008 ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಂ ರೇವಣ್ಣ ರಚಿಸಿದ 'ಕನ್ನಡ ತಾಯ ಚಿಕ್ಕಮಗಳು' ಹಾಗೂ ಶಪಿತಾ ಬೇಗಂ ರಚಿಸಿದ 'ನೆನಪಿನ ಪಯಣ' ಹಾಗೂ 'ಸಂಕಲ್ಪ ಸಿದ್ಧಿ' ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ ರಾಜೇಗೌಡ, ಮಾಜಿ ಸಚಿವೆ ಮೋಟಮ್ಮ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಎಂ ಲೋಕೇಶ್, ಸ್ವಾಗತ ಸಮಿತಿ ಪೋಷಕ ರವೀಂದ್ರ ಕುಕ್ಕುಡಿಗೆ, ಸ್ವಾಗತ ಸಮಿತಿ ಕೋಶಾಧ್ಯಕ್ಷ ಕೆ.ಟಿ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News