×
Ad

ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ‘ಸಹಕಾರ ರತ್ನ’ ಪ್ರಶಸ್ತಿ: ಸಚಿವ ಎಸ್.ಟಿ.ಸೋಮಶೇಖರ್

Update: 2022-03-18 20:33 IST

ಬೆಂಗಳೂರು, ಮಾ.18: ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ‘ಸಹಕಾರ ರತ್ನ’ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು, ಮಾ.20ರಂದು ಬೆಳಗ್ಗೆ 11 ಗಂಟೆಗೆ ಕೆಂಗೇರಿ ಉಪನಗರದ ಗಣೇಶ ಮೈದಾನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಶುಕ್ರವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಟ ಪುನೀತ್ ರಾಜ್‍ಕುಮಾರ್ ನಮ್ಮ ಸಹಕಾರ ಇಲಾಖೆಯ ಉತ್ಪನ್ನ ರಾಯಭಾರಿ ಆಗಿದ್ದರು. ಅವರಿಗೆ ಮರಣೋತ್ತರವಾಗಿ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಸಹಕಾರ ರತ್ನ ಪ್ರಶಸ್ತಿಯು 15 ಗ್ರಾಂ ಚಿನ್ನದ ಪದಕ, ಪ್ರಮಾಣಪತ್ರವನ್ನು ಒಳಗೊಂಡಿರುತ್ತದೆ. ಪ್ರಶಸ್ತಿಗಾಗಿ ಒಟ್ಟು 100 ಅರ್ಜಿಗಳು ಸ್ವೀಕೃತವಾಗಿವೆ. ಈ ಹಿಂದೆ ಪ್ರತಿ ವರ್ಷ ಕೇವಲ ಆರು ಮಂದಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತಿತ್ತು. ಕಳೆದ ವರ್ಷದಿಂದ ಜಿಲ್ಲೆಗೆ ಒಬ್ಬರಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದ್ದೇವೆ. ಇದರ ಜೊತೆಗೆ, ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೂ ಪ್ರಶಸ್ತಿ ನೀಡಲಾಗುವುದು. ಸ್ತ್ರೀಶಕ್ತಿ ಸಂಘಗಳಿಗೆ 20 ಕೋಟಿ ರೂ.ಸಹಾಯಧನ ನೀಡಲಾಗುವುದು ಎಂದು ಸೋಮಶೇಖರ್ ಹೇಳಿದರು.

ಡಿಸಿಸಿ-ಅಪೆಕ್ಸ್ ಬ್ಯಾಂಕ್ ವಿಲೀನ: ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ ವಿಲೀನ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೋಮಶೇಖರ್, ಡಿಸಿಸಿ ಬ್ಯಾಂಕ್‍ಗಳನ್ನು ಅಪೆಕ್ಸ್ ಬ್ಯಾಂಕ್ ಜೊತೆ ವಿಲೀನ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಸುತ್ತಿನ ಸಭೆ ಮಾಡಿದ್ದೇವೆ ಎಂದರು.

ಜಾರ್ಖಂಡ್ ಮತ್ತು ಕೇರಳ ರಾಜ್ಯದಲ್ಲಿ ಈ ರೀತಿ ಮಾಡಲಾಗಿದೆ. ಇದರಿಂದ, ರೈತರಿಗೆ ಬಡ್ಡಿಯಲ್ಲಿ ಉಳಿತಾಯ ಆಗುತ್ತದೆ. ನಮ್ಮ ರಾಜ್ಯದಲ್ಲಿಯೂ ಡಿಸಿಸಿ ಹಾಗೂ ಅಪೆಕ್ಸ್ ಬ್ಯಾಂಕ್ ವಿಲೀನ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಬಜೆಟ್ ಅಧಿವೇಶನ ಮುಗಿದ ನಂತರ ನಮ್ಮ ಅಧಿಕಾರಿಗಳು ಜಾರ್ಖಂಡ್ ಹಾಗೂ ಕೇರಳಕ್ಕೆ ಅಧ್ಯಯನ ಪ್ರವಾಸ ಕೈಗೊಂಡು, ಅದರ ಸಾಧಕ ಬಾಧಕಗಳ ಬಗ್ಗೆ ವರದಿ ಕೊಡುತ್ತಾರೆ. ಆನಂತರ ಸರಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಸೋಮಶೇಖರ್ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಭಾರತದ ಸಹಕಾರ ಚಳವಳಿ ಪ್ರಪಂಚದಲ್ಲೇ ಮಹತ್ವದ ಸ್ಥಾನ ಪಡೆದಿದೆ. ದೇಶದಲ್ಲಿ 8.5 ಲಕ್ಷಕ್ಕೂ ಅಧಿಕ ಸಹಕಾರ ಸಂಸ್ಥೆಗಳಿದ್ದು, 30 ಕೋಟಿಗೂ ಅಧಿಕ ಸದಸ್ಯರು ಇದರ ಭಾಗವಾಗಿದ್ದಾರೆ. ನಮ್ಮ ರಾಜ್ಯದಲ್ಲಿ ಪ್ರಸಕ್ತ ಸಾಲಿನ ಮಾ.31ರ ಅಂತ್ಯಕ್ಕೆ 46,544 ಸಹಕಾರ ಸಂಸ್ಥೆಗಳಲ್ಲಿ 2.30 ಕೋಟಿ ಸದಸ್ಯರಾಗುವ ವಿಶ್ವಾಸವಿದೆ ಎಂದರು.

ಈ ಸಹಕಾರ ಸಂಘಗಳಲ್ಲಿ 6,343.38 ಕೋಟಿ ರೂ. ಶೇರು ಬಂಡವಾಳವಿದ್ದು, 1.15 ಲಕ್ಷ ಕೋಟಿ ರೂ. ಠೇವಣಿಗಳನ್ನು ಹೊಂದಲಾಗಿದೆ. ಒಟ್ಟು 1.56 ಲಕ್ಷ ಕೋಟಿ ರೂ. ದುಡಿಯುವ ಬಂಡವಾಳವಿದೆ ಎಂದು ಜಿ.ಟಿ.ದೇವೇಗೌಡ ಮಾಹಿತಿ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News