ಹಂಪಿ ಪ್ರವಾಸಿಗಳಿಗೆ ಆ್ಯಪ್ ಆಧಾರಿತ ಸೈಕಲ್ ಸೇವೆ ?
ಹಂಪಿ: ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣವಾದ ಹಂಪಿಗೆ ಆಗಮಿಸುವ ಪ್ರವಾಸಿಗರಿಗಾಗಿ ಆ್ಯಪ್ ಆಧಾರಿತ ಸೈಕಲ್ ಸೇವೆಯನ್ನು ಒದಗಿಸುವ ಸಂಬಂಧ ಹಂಪಿ ವಿಶ್ವ ಪರಂಪರೆ ತಾಣ ಪ್ರದೇಶ ನಿರ್ವಹಣಾ ಪ್ರಾಧಿಕಾರ ಸಾರ್ವಜನಿಕ ಅಭಿಪ್ರಾಯಗಳನ್ನು ಕೇಳಿದೆ.
ನಗರ ಭೂ ಸಾರಿಗೆ ನಿರ್ದೇಶನಾಲಯ ಈಗಾಗಲೇ ಸಾರ್ವಜನಿಕ ಸೈಕಲ್ ಸೇವೆಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಸಮೀಕ್ಷೆ ಕೈಗೊಂಡಿದೆ. ಸೈಕಲ್ ಸ್ವರೂಪ ಮತ್ತು ಸೂಕ್ತವಾದ ಋತುಮಾನದ ಬಗೆಗಿನ ಪ್ರಶ್ನೆಗಳನ್ನು ಸಮೀಕ್ಷೆಯ ಪ್ರಶ್ನಾವಳಿ ಒಳಗೊಂಡಿದೆ.
ಕೆಲ ಖಾಸಗಿ ವ್ಯಕ್ತಿಗಳು ಮತ್ತು ಹೋಮ್‍ಸ್ಟೇಗಳು ಇದೀಗ ಯಾವುದೇ ಮಾರ್ಗಸೂಚಿ ಅಥವಾ ಇತರ ಅಗತ್ಯ ಮಾಹಿತಿಗಳನ್ನು ನೀಡದೇ ಬಾಡಿಗೆಗೆ ಸೈಕಲ್ ನೀಡುತ್ತಿದ್ದಾರೆ. ಕೆಲ ಪ್ರವಾಸಿಗರು ಇದೀಗ ಸೈಕಲ್ ಬಳಸುತ್ತಿದ್ದು, ಅವರಿಗೆ ಮಾರ್ಗಗಳನ್ನು ನಿರ್ದಿಷ್ಟವಾಗಿ ಪ್ರಾಧಿಕಾರ ತಿಳಿಸಿಲ್ಲ. ಈ ಸವಾಲುಗಳನ್ನು ಬಗೆಹರಿಸುವುದು ಹೊಸ ಉಪಕ್ರಮದ ಉದ್ದೇಶ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚತುಶ್ಚಕ್ರ ವಾಹನ ಬಳಸಿ ಎಲ್ಲ ಸ್ಥಳಗಳನ್ನು ತಲುಪುವುದು ಸಾಧ್ಯವಿಲ್ಲ. ಇಂಥ ಕಡೆಗಳಿಗೆ ಸೈಕಲ್ ಸೂಕ್ತ. ವಿವಿಧ ಕಾರಣಗಳಿಂದ ಸೈಕಲ್ ಚಲಾಯಿಸಲು ಸಾಧ್ಯ ಇಲ್ಲದವರಿಗೆ ಪ್ರಾಧಿಕಾರ ಎಲೆಕ್ಟ್ರಿಕ್ ಸೈಕಲ್‍ಗಳನ್ನು ಪರಿಚಯಿಸುವ ಬಗ್ಗೆಯೂ ಚಿಂತನೆ ನಡೆಸಿದೆ. ಸೈಕಲ್ ಸವಾರಿಗೆ ಸೂಕ್ತ ಮಾರ್ಗವನ್ನು ಕೂಡ ಸೂಚಿಸಲು ಪ್ರಾಧಿಕಾರ ನಿರ್ಧರಿಸಿವೆ. ಸಮೀಕ್ಷೆ ಮುಗಿದ ಬಳಿಕ ಶುಲ್ಕ ಮತ್ತು ಇತರ ಅಂಶಗಳ ಬಗ್ಗೆ ನಿರ್ಧರಿಸಲು ಏಜೆನ್ಸಿಯನ್ನು ಪ್ರಾಧಿಕಾರ ನೇಮಿಸಲಿದೆ.