ಅಸ್ಪೃಶ್ಯತೆ ಮುಕ್ತ ಗ್ರಾಮ ಎಂದು ಘೋಷಿಸುವ ಗ್ರಾಮ ಪಂಚಾಯತ್‍ಗಳಿಗೆ ಹೆಚ್ಚು ಅನುದಾನ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2022-03-19 12:48 GMT

ಚಿಕ್ಕಮಗಳೂರು, ಮಾ.19: ಅಸ್ಪೃಶ್ಯತೆ ಮುಕ್ತ ಗ್ರಾಮ ಪಂಚಾಯತ್ ಎಂದು ಘೋಷಣೆ ಮಾಡುವ ಗ್ರಾಮ ಪಂಚಾಯತ್‍ಗಳಿಗೆ ಸರಕಾರದಿಂದ ಹೆಚ್ಚು ಅನುದಾನ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.

ಶನಿವಾರ ನಗರದ ಎಐಟಿ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಿಂದುಗಳಿದ ವರ್ಗ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಸರಕಾರದ ವಿವಿಧ ಇಲಾಖೆಗಳ ಯೋಜನೆಗಳ ಜಿಲ್ಲಾಮಟ್ಟದ ಮಾಹಿತಿ ಕಾರ್ಯಾಗಾರ ಅಂತ್ಯೋದಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ವಿವಿಧ ಇಲಾಖೆಗಳ ಮೂಲಕ ಅನೇಕ ಯೋಜನೆಗಳನ್ನು ರೂಪಿಸಿದೆ. ಈ ಯೋಜನೆಗಳನ್ನು ನೈಜ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಹಾಗೂ ನಗರ, ಪಟ್ಟಣ ಪಂಚಾಯತ್ ಸದಸ್ಯರ ಪಾತ್ರ ಮುಖ್ಯ. ಸರಕಾರದ ವಿವಿಧ ಇಲಾಖೆಗಳ ಯೋಜನೆಗಳ ಬಗ್ಗೆ ಗ್ರಾಪಂ ಸದಸ್ಯರಿಗೆ ಸಮಗ್ರ ಮಾಹಿತಿ ನೀಡಿ ಅವುಗಳ ಸಮರ್ಪಕ ಅನುಷ್ಠಾನದ ಬಗ್ಗೆ ಮಾಹಿತಿ ನೀಡಲು ಅಂತ್ಯೋದಯ ಮಾಹಿತಿ ಕಾರ್ಯಾಗಾರ ಮಹತ್ವದ್ದಾಗಿದೆ ಎಂದರು. 

ಅಸ್ಪೃಶ್ಯತೆ ಈ ಸಮಾಜಕ್ಕೆ ಅಂಟಿರುವ ಪಿಡುಗಾಗಿದೆ. ಅಸ್ಪಶ್ಯತೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವಿನಯ ಸಾಮರಸ್ಯ ಯೋಜನೆ ಘೋಷಿಸಿದ್ದಾರೆ. ಈ ಸಂಬಂಧ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಜನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದ ಅವರು, ಪ್ರತೀ ಗ್ರಾಮ ಪಂಚಾಯತ್ ಸದಸ್ಯರು ತಮ್ಮ ಗ್ರಾಮಗಳನ್ನು ಅಸ್ಪøಶ್ಯತೆಯ ಪಿಡುಗಿನಿಂದ ಮುಕ್ತಗೊಳಿಸಲು ಶ್ರಮಿಸಬೇಕು. ಅಸೃಶ್ಯತೆ ಮುಕ್ತ ಗ್ರಾಮ ಪಂಚಾಯತ್ ಎಂದು ಘೋಷಿಸುವ ಗ್ರಾಮಪಂಚಾಯತ್‍ಗಳಿಗೆ ಹೆಚ್ಚು ಅನುದಾನ ಒದಗಿಸಲು ಶ್ರಮಿಸಲಾಗುವುದು ಎಂದರು.

ರಾಜ್ಯದಲ್ಲಿ 1ಕೋಟಿ 25ಲಕ್ಷ ಜನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿದ್ದಾರೆ. 67 ಲಕ್ಷ ಹಿಂದುಳಿದ ವರ್ಗಗಳ ಜನರು ರಾಜ್ಯದಲ್ಲಿದ್ದು, ಇವರಿಗೆ ಸಾಮಾಜಿಕ ನ್ಯಾಯ ನೀಡೊ ನ್ಯಾಯಬದ್ಧವಾದ ಬದುಕು ಕಟ್ಟಿಕೊಡಬೇಕಾದ ಹೊಣೆಗಾರಿಗೆ ಸರಕಾರದ್ದಾಗಿ. ಈ ಕೆಲಸ ಗ್ರಾಮ ಪಂಚಾಯತ್‍ನಿಂದ ಮೊದಲು ಆರಂಭವಾಗಬೇಕಿದೆ ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 19 ಸಾವಿರ ಕುಟುಂಬಗಳಿಗೆ, ದೇವರಾಜ್ ಅರಸ್ ಅಭಿವೃದ್ಧಿ ನಿಗಮದಿಂದ 4ಸಾವಿರ ಜನರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ನೀಡಲಾಗುತ್ತಿದೆ. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಗಂಗಾ ಕಲ್ಯಾಣ ಯೋಜನೆಯ ಹಣವನ್ನು ನೇರವಾಗಿ ಸಂದಾಯ ಮಾಡಲು ಚಿಂತನೆ ಮಾಡಲಾಗಿದೆ ಎಂದು ತಿಳಿಸಿದರು. 
 
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಪರಿಸ್ಥಿತಿಯ ಕಾರಣಗಳಿಂದ ಧ್ವನಿ ಇಲ್ಲದವರೂ ಹಿಂದುಳಿ ಯುತ್ತಿದ್ದಾರೆ. ಬಲಿಷ್ಟರು ಬಲಾಢ್ಯರಾಗುತ್ತಿದ್ದಾರೆ. ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ಶಕ್ತಿ ಇಲ್ಲದವರಿಗೆ ಶಕ್ತಿ ನೀಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸರಕಾರದ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದು ಸರಕಾರದ ಆಶಯವಾಗಿದೆ. ಈ ಕಾರ್ಯ ಸರಕಾರವೊಂದರಿಂದಲೇ ಸಾಧ್ಯವಿಲ್ಲ, ಗ್ರಾಪ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಸರಕಾರದಿಂದ ಜನರಿಗೆ ಸಿಗುವ ಯೋಜನೆಗಳ ಅಧ್ಯಯನ ಮಾಡಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಅಂತ್ಯೋದಯ ಕಾರ್ಯಾಗಾರ ಜನಪ್ರತಿನಿಧಿಗಳಿಗೆ ಹೆಚ್ಚು ಶಕ್ತಿ ನೀಡಲಿದೆ ಎಂದರು.     
  
ಶಾಸಕ ಸಿ.ಟಿ.ರವಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮಗಳ ಅಭಿವೃದ್ಧಿಯ ಆಧಾರಸ್ತಂಭ. ನಿಮ್ಮ ನಿಮ್ಮ ಗ್ರಾಮಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾಸ್ ತಯಾರಿಸಿ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿದಲ್ಲಿ ಸ್ವಾವಲಂಭಿ ಗ್ರಾಮ ಪಂಚಾಯತ್‍ಗಳನ್ನಾಗಿ ಮಾಡಬಹುದು. ಈ ನಿಟ್ಟಿನಲ್ಲಿ ಗ್ರಾಮಪಂಚಾಯತ್ ಸದಸ್ಯರು ಚಿಂತಿಸಬೇಕು ಎಂದರು.

ಗ್ರಾಮಗಳಲ್ಲಿ ಸಾಮರಸ್ಯದ ಅರಿವು ಮೂಡಿಸಬೇಕು. ಊರಿಗೊಂದು ಶಾಲೆ ಇದ್ದಂತೆ ಊರಿಗೊಂದೇ ಸ್ಮಶಾನ ಇರಬೇಕೇ ಹೊರತು ಜಾತಿಗೊಂದು ಸ್ಮಶಾನ ಇದ್ದಲ್ಲಿ ಜಾತೀಯತೆಗೆ ಪ್ರೋತ್ಸಾಹ ನೀಡದಂತೆ ಎಂದ ಅವರು, ಈ ರೀತಿ ಯೋಚಿಸುವ ಮೂಲಕ ಜಾತಿ, ಅಸ್ಪøಶ್ಯತೆಯಂತಹ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯ ಎಂದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಜೀವರಾಜ್, ವಿಧಾನ ಪರಿಷತ್ ಸದಸ್ಯರಾದ ಎಂ.ಕೆ.ಪ್ರಾಣೇಶ್, ಎಸ್.ಎಲ್.ಭೋಜೇಗೌಡ ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಯುಕ್ತ ಕೆ.ಎ.ದಯಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತರೀಕೆರೆ ಶಾಸಕ ಡಿ.ಎಸ್.ಸುರೇಶ್, ವಿಧಾನ ಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್, ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಹಕ ನಿರ್ದೇಶಕ ರಮೇಶ್ ದೇಸಾಯಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಪಿ.ಎಸ್.ಕಾಂತರಾಜು, ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್, ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಡಾ|ಬಿ.ವಿ.ಚೈತ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ವೈ.ಸೋಮಶೇಖರ್ ಸೇರಿ ದಂತೆ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಇದ್ದರು. 

ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಸ್ವಾಗತಿಸಿದರು. ನಾಗಶ್ರೀತ್ಯಾಗರಾಜ್ ನಿರೂಪಿಸಿ ದರು. ಕಾರ್ಯಕ್ರಮದಲ್ಲಿ ಎಸೆಸೆಯಲ್ಲಿ ಹೆಚ್ಚು ಅಂಕಗಳಿಸಿದ ಪರಿಶಿಷ್ಟಜಾತಿಯ ವಿದ್ಯಾರ್ಥಿಗಳು ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಇದೇ ವೇಳೆ ವಿತರಿಸಲಾಯಿತು.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News