×
Ad

ಸಾರಿಗೆಯನ್ನು ಉತ್ತಮಪಡಿಸುವ ಸರಕಾರದ ಮಾತುಗಳು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ: ಕುಮಾರಸ್ವಾಮಿ ಆಕ್ರೋಶ

Update: 2022-03-19 18:37 IST

ಬೆಂಗಳೂರು, ಮಾ.19: ತುಮಕೂರು ಜಿಲ್ಲೆಯ ಪಾವಗಟ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್ ಅಪಘಾತಕ್ಕೀಡಾಗಿ ಎಂಟು ಪ್ರಯಾಣಿಕರು ಸಾವನ್ನಪ್ಪಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಖಾಸಗಿ ಬಸ್‍ಗಳ ಗುಣಮಟ್ಟ, ಪರವಾನಿಗೆ, ತಾಂತ್ರಿಕ ಕ್ಷಮತೆ, ವೇಗದ ಚಾಲನೆ ಇತ್ಯಾದಿಗಳ ಬಗ್ಗೆ ನಿರಂತರವಾಗಿ ದೂರು ಬರುತ್ತಲೇ ಇದ್ದರೂ ಸರಕಾರವು ನಿರ್ಲಕ್ಷ್ಯ ಧೋರಣೆಯಲ್ಲೇ ಇದೆ. ಗ್ರಾಮೀಣ ಸಾರಿಗೆಯನ್ನು ಉತ್ತಮಪಡಿಸುವ ಸರಕಾರದ ಮಾತುಗಳು ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಗಾರಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಸಾರಿಗೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು. ದುರಂತದಲ್ಲಿ ಸಾವನ್ನಪ್ಪಿದವರಿಗೆ ದೊಡ್ಡ ಪ್ರಮಾಣದ ಪರಿಹಾರ ನೀಡಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಅವರಿಗೂ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಅತಿವೇಗ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಸಿಕ್ಕಿದ್ದು, ಬಸ್ಸಿನ ಟಾಪ್ ಮೇಲೆಯೇ 40ಕ್ಕೂ ಹೆಚ್ಚು ಪ್ರಯಾಣಿಕರು ಕೂತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಇದು ಸಾರಿಗೆ ಇಲಾಖೆಯ ನಿರ್ಲಕ್ಷ್ಯದ ಪರಮಾವಧಿ. ಈ ಬಗ್ಗೆ ಸರಕಾರ ಕಠಿಣ ಕ್ರಮ ವಹಿಸಬೇಕು. ಕರ್ತವ್ಯಲೋಪ ಎಸಗಿರುವ ಸಾರಿಗೆ ಇಲಾಖೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ದುರಂತದಲ್ಲಿ ಜೀವ ಕಳೆದುಕೊಂಡ ಎಲ್ಲ ಅಮೂಲ್ಯ ಜೀವಗಳಿಗೆ ನನ್ನ ಶ್ರದ್ಧಾಂಜಲಿ ಹಾಗೂ ಎಲ್ಲ ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News