ಮಾ.28ರಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಂ.ಬಿ.ಪಾಟೀಲ್ ಪದಗ್ರಹಣ: ಸಲೀಂ ಅಹ್ಮದ್

Update: 2022-03-19 13:28 GMT

ಬೆಂಗಳೂರು, ಮಾ.19: ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನೇಮಕ ಮಾಡಿದ್ದು, ಇದೇ ತಿಂಗಳು 28ರಂದು ಸೋಮವಾರ ಅರಮನೆ ಮೈದಾನದ ಗಾಯತ್ರಿ ವಿಹಾರ್‍ನಲ್ಲಿ ಮಧ್ಯಾಹ್ನ 3 ಗಂಟೆಗೆ ಪದಗ್ರಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದರು.

ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ಉದ್ಘಾಟನೆಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮಾಡಲಿದ್ದು, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿಯ ಎಲ್ಲ ಕಾರ್ಯಾಧ್ಯಕ್ಷರು ಸೇರಿದಂತೆ ಹಿರಿಯ ಶಾಸಕರು, ಮಾಜಿ ಸಚಿವರು, ಸಂಸದರು, ಮಾಜಿ ಸಂಸದರು, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಎಲ್ಲ ಘಟಕದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು. 

ಈ ಮೂಲಕ ಎಂ.ಬಿ.ಪಾಟೀಲರು ಅಧಿಕಾರ ವಹಿಸಿ, ಇಡೀ ರಾಜ್ಯದ ಪ್ರವಾಸ ಮಾಡಿ ಪಕ್ಷ ಕಟ್ಟುವ ಕೆಲಸ, ಪಕ್ಷದ ಇತಿಹಾಸ, ವಿಚಾರ, ಕೇಂದ್ರ ಹಾಗೂ ರಾಜ್ಯದ ಭ್ರಷ್ಟಾಚಾರ ವಿಚಾರಗಳನ್ನು ಎಲ್ಲ ಜಿಲ್ಲೆ, ಬ್ಲಾಕ್ ಸೇರಿದಂತೆ ಎಲ್ಲ ಹಂತಗಳಲ್ಲಿ ತಲುಪುವಂತೆ ಮಾಡಲಿದ್ದಾರೆ ಸಲೀಂ ಅಹ್ಮದ್ ಹೇಳಿದರು.

ಕೆಪಿಸಿಸಿ ಪ್ರಚಾರ ಸಮಿತಿಯ ನಿಯೋಜಿತ ಮುಖ್ಯಮಂತ್ರಿ ಎಂ.ಬಿ.ಪಾಟೀಲ್ ಮಾತನಾಡಿ, ಐತಿಹಾಸಿಕ ಕಾಂಗ್ರೆಸ್ ಪಕ್ಷಕ್ಕೆ, ಕರ್ನಾಟಕದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನನ್ನನ್ನು ನೇಮಕ ಮಾಡಿದ್ದು ಅವರಿಗೆ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲರೂ ನನ್ನ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಾನು ಮಾ.28ರಂದು ಎಲ್ಲ ನಾಯಕರು, ಶಾಸಕರು, ಮಾಜಿ ಶಾಸಕರು, ಪಕ್ಷದ ಕಾರ್ಯಕರ್ತರ ಸಮ್ಮುಖದಲ್ಲಿ ಅಧಿಕಾರ ಸ್ವೀಕಾರ ಮಾಡಿ ನನ್ನ ಕೆಲಸ ಆರಂಭಿಸುತ್ತೇನೆ ಎಂದು ಅವರು ಹೇಳಿದರು.

ನನ್ನ ಕಾರ್ಯಕ್ರಮದ ಬಗ್ಗೆ ಪದಗ್ರಹಣ ಕಾರ್ಯಕ್ರಮದ ವೇಳೆ ಹೇಳುತ್ತೇನೆ. ಪ್ರಚಾರ ಸಮಿತಿ ಅಧ್ಯಕ್ಷನಾದ ನಂತರ ನಾನು ಪಕ್ಷದ ವರ್ಚಸ್ಸು ಹೆಚ್ಚಿಸಬೇಕಾಗುತ್ತದೆ. ಪ್ರಚಾರ ಸಮಿತಿಯ ಪದಾಧಿಕಾರಿಗಳ ನೇಮಕವನ್ನು ಸುರ್ಜೆವಾಲ ಹಾಗೂ ಎಲ್ಲ ನಾಯಕರ ಜತೆ ಚರ್ಚಿಸಿ ಮಾಡುತ್ತೇನೆ. ನಾನು 5 ಬಾರಿ ಶಾಸಕನಾಗಿ, 1 ಬಾರಿ ಸಂಸದನಾಗಿ, 5 ವರ್ಷ ಜಲ ಸಂಪನ್ಮೂಲ ಸಚಿವನಾಗಿ ಹಾಗೂ ಗೃಹ ಸಚಿವನಾಗಿ ಕಾರ್ಯ ನಿರ್ವಹಿಸಿರುವ ಅನುಭವ ಇದ್ದು, ಎಲ್ಲನಾಯಕರು, ಕಾರ್ಯಕರ್ತರು, ಮಾಧ್ಯಮದವರು ನನಗೆ ಸಾಕಷ್ಟು ಸಲಹೆ ನೀಡಿದ್ದಾರೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ನಾನು ಅಧಿಕಾರ ವಹಿಸಿಕೊಂಡ ನಂತರ ಹಿರಿಯ ನಾಯಕರ ಸಭೆ ಮಾಡಿ ಅವರ ಅಭಿಪ್ರಾಯ ಸಂಗ್ರಹಿಸಿ, ನಂತರ ಯುವ ಮುಖಂಡರು, ಶಾಸಕರ ಅಭಿಪ್ರಾಯ ಪಡೆದು ನಮ್ಮ ಕಾರ್ಯತಂತ್ರ ರೂಪಿಸುತ್ತೇನೆ. ಉಳಿದ ವಿಚಾರವನ್ನು ಪದಗ್ರಹಣ ಕಾರ್ಯಕ್ರಮದಲ್ಲಿ ಹೇಳುತ್ತೇನೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥ ಡಾ.ಬಿ.ಎಲ್.ಶಂಕರ್, ಕಾಂಗ್ರೆಸ್ ನಾಯಕ ಮೆಹ್ರೋಝ್ ಖಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News