ಕೋಲಾರ: ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ವಿವಾದಗಳಿಗೆ ತೆರೆ ಎಳೆದ ಜಿಲ್ಲಾಡಳಿತ

Update: 2022-03-19 14:18 GMT

ಕೋಲಾರ,ಮಾ.19: ಕಳೆದ ಒಂದು ವಾರದಿಂದ ಉಂಟಾಗಿದ್ದ ವಿವಾದಕ್ಕೆ ಒಳಗಾಗಿದ್ದ ನಗರದ ಹೃದಯ ಭಾಗದಲ್ಲಿರುವ ಕ್ಲಾಕ್ ಟವರ್ ಮೇಲೆ ಶನಿವಾರ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಜಿಲ್ಲಾಡಳಿತ ವಿವಾದಕ್ಕೆ ತೆರೆ ಎಳೆದಿದೆ. 

ಬೆಳಗಿನ ಜಾವ ಐದು ಗಂಟೆಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಕ್ಲಾಕ್ ಟವರ್ ಗೆ ಬಿಳಿ ಬಣ್ಣ ಬಳಿಯುವುದರೊಂದಿಗೆ ಟವರ್ ಸುತ್ತಲೂ ತ್ರಿವರ್ಣ ಧ್ವಜದ ಬಣ್ಣ ಬಳಿದು ಅಂಜುಮನ್ ಸಂಸ್ಥೆಯ ಮುಖಂಡರ  ಸಮ್ಮುಖದಲ್ಲಿ ಜಿಲ್ಲಾಧಿಕಾರಿ ವೆಂಕಟ ರಾಜ ಮತ್ತು ಎಸ್ ಪಿ ಡಿ. ದೇವರಾಜ್ ಅವರು ರಾಷ್ಟ್ರ ಧ್ವಜ ಹಾರಿಸಿದರು. 

ಈ ಮೂಲಕ ಇತ್ತೀಚೆಗೆ 'ಕ್ಲಾಕ್​ ಟವರ್​ನಲ್ಲಿ ತ್ರಿವರ್ಣ ಧ್ವಜ ಹಾರಿಸಲು ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ. ಕ್ಲಾಕ್​ ಟವರ್​ ಅಂದ್ರೆ ಅದೇನೋ ಬೇರೆ ಎಲ್ಲೋ ಇರುವಂತೆ ಬಿಂಬಿಸಲಾಗಿದೆ. ಹಾಗಾಗಿ ಕ್ಲಾಕ್​ ಟವರ್​ನಲ್ಲಿ ತ್ರಿವರ್ಣ ದ್ವಜ ಹಾರಿಸಲು ನಾನು ಸಾಯೋದಕ್ಕೂ ಸಿದ್ಧ' ಅಂತ  ಸಂಸದ ಮುನಿಸ್ವಾಮಿ ಹೇಳಿದ್ದ ಹೇಳಿಕೆಯಿಂದ ಉಂಟಾಗಿದ್ದ ಗೊಂದಲಗಳಿಗೆ ಪರಿಹಾರ ಸಿಕ್ಕಂತಾಗಿ ಜನತೆ ನೆಮ್ಮದಿಯ ಉಸಿರು ಬಿಡುವಂತಾಯಿತು. 

ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಇರುವ ಕಾರಣ ಹಾಗೂ ಕ್ಲಾಕ್ ಟವರ್ ಸೂಕ್ಷ್ಮ ಪ್ರದೇಶವಾಗಿರುವ ಕಾರಣ ಸಂಸದ ಮುನಿಸ್ವಾಮಿ ಹೋರಾಟಕ್ಕೆ ಕೋಲಾರ ಜಿಲ್ಲಾ ಎಸ್ ಪಿ ಡಿ. ದೇವರಾಜ್  ಅನುಮತಿ ನೀಡಿರಲಿಲ್ಲ. ಶುಕ್ರವಾರ ಸಂಜೆ ಅಂಜುಮನ್ ಸಂಸ್ಥೆಯ ಮುಖಂಡರ ಜೊತೆ ಎಸ್. ಪಿ. ದೇವರಾಜ್ ಮತ್ತು ಜಿಲ್ಲಾಧಿಕಾರಿ ವೆಂಕಟ ರಾಜಾ ಅವರು ಶಾಂತಿಯುತ ಮಾತುಕತೆ ನಡೆಸಿ ತ್ರಿವರ್ಣ ಧ್ವಜ ಹಾರಿಸಲು ಎಲ್ಲರೂ ಸಹಮತ ಸೂಚಿಸಿದರು. 

ಇದರಿಂದ ಯಾವುದೇ ಅಹಿತಕರ ಘಟನೆಗಗಳಿಗೆ ಆಸ್ಪದ ನೀಡದೆ ಪೊಲೀಸ್ ಬಂದೋಬಸ್ತ್ ನಡುವೆ ಜಿಲ್ಲಾಧಿಕಾರಿ ವೆಂಕಟ ರಾಜಾ ಮತ್ತು ಎಸ್. ಪಿ. ಡಿ. ದೇವರಾಜ್ ಅವರು ರಾಷ್ಟ್ರ ಧ್ವಜ ಹಾರಿಸುವಲ್ಲಿ ಯಶ್ವಿಯಾದರು. 

ಕೋಲಾರ ನಗರದಾದ್ಯಂತ ಮಾರ್ಚ್ 28ರ ತನಕ ಸೆಕ್ಷನ್ 144 ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಮಾದ್ಯಮಗಳಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News