ಮೂರು ರೈತ ವಿರೋಧಿ ಕಾಯ್ದೆಗಳನ್ನು ಶಾಸನಬದ್ಧವಾಗಿ ಹಿಂಪಡೆಯಿರಿ: ಕೋಡಿಹಳ್ಳಿ ಚಂದ್ರಶೇಖರ್

Update: 2022-03-19 15:15 GMT

ಬೆಂಗಳೂರು, ಮಾ.19: ರೈತರ ಅಸ್ತಿತ್ವವನ್ನು ಕಸಿದುಕೊಳ್ಳಲು ಪೂರಕವಾಗಿ ರೂಪಿಸಿ, ಜಾರಿಗೊಳಿಸಿದ ಮೂರು ರೈತ ವಿರೋಧಿ ಕಾಯ್ದೆಗಳನ್ನು ಶಾಸನಬದ್ಧವಾಗಿ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ್ಯ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ. 

ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರವು ಕೃಷಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿತ್ತು. ಆದರೆ ರೈತರ ನ್ಯಾಯಬದ್ಧ ಹೋರಾಟಗಳಿಗೆ ಮಣಿದ ಕೇಂದ್ರ ಸರಕಾರವು ಕಾಯ್ದೆಗಳನ್ನು ಹಿಂಪಡೆದಿದೆ. ಆದರೆ ರಾಜ್ಯದಲ್ಲಿ ರೈತರನ್ನು ಕೃಷಿಯಿಂದ ದೂರವಿರಿಸಲು ಜಾರಿಗೊಳಿಸಿದ ಕರ್ನಾಟಕ ಭೂ ಸುಧಾರಣಾ (ತಿದ್ದುಪಡಿ) ಕಾಯಿದೆ 2020, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ನಿಯಂತ್ರಣ ಅಭಿವೃದ್ಧಿ) ಕಾಯಿದೆ 2020 ಹಾಗೂ ಕರ್ನಾಟಕ ಜಾನುವಾರು ಹತ್ಯಾ (ನಿಷೇಧ ಮತ್ತು ಸಂರಕ್ಷಣೆ) ಕಾಯ್ದೆ 2020 ಕಾಯ್ದೆಗಳನ್ನು ಹಿಂಪಡೆಯುವ ನೈತಿಕ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ. ರೈತರು ಈ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಮಾ.21ರಂದು ರೈತರ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.

ರಾಜ್ಯ ಸರಕಾರವು ರೈತರಿಂದ ಭೂಮಿ ಹಾಗೂ ಕೃಷಿ ಮಾರುಕಟ್ಟೆಗಳನ್ನು ಕಾರ್ಪೊರೆಟ್ ಕಂಪನಿಗಳಿಗೆ ನೀಡುತ್ತಿದೆ.  ಗೋ ಹತ್ಯೆ ನಿಷೇಧದ ಬಗ್ಗೆ ಭಾವನಾತ್ಮಕ ಮಾತು ಹೇಳುತ್ತಾ  ಹೈನುಗಾರಿಕೆಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡುತ್ತಿದೆ. 2013ರ ಭೂಸ್ವಾಧೀನ ಕಾಯ್ದೆಯ ತಿದ್ದುಪಡಿಯಲ್ಲಿ ರೈತರ ಭೂಮಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಹುನ್ನಾರ ಅಡಗಿದೆ ಎಂದು ಅವರು ಹೇಳಿದರು.

ದೇಶದ ಸಂಪತ್ತಿನ ಸೃಷ್ಟಿಗೆ ಸರಿಯಾಗಿ ಯೋಜನೆಗಳನ್ನು ರೂಪಿಸದ ಸರಕಾರಗಳು ದೇಶದ ಎಲ್ಲಾ ಸಂಪತ್ತನ್ನು ಎಂಎನ್‍ಸಿಗಳಿಗೆ ನೀಡುತ್ತಿವೆ. ತೆರಿಗೆ ಪದ್ಧತಿಯಲ್ಲಿ ಜನಸಾಮಾನ್ಯರಿಗೆ ಹೆಚ್ಚು ಹೊರೆ ನೀಡಿದ್ದು, ಕಂಪನಿಗಳಿಗೆ ತೆರಿಗೆಯಲ್ಲಿ ಹೆಚ್ಚು ರಿಯಾಯಿತಿ ನೀಡಲಾಗುತ್ತಿದೆ. ಆಡಳಿತ ಕ್ರಮ ನಿಯಂತ್ರಣ ತಪ್ಪಿದ್ದು, ಭ್ರಷ್ಟಾಚಾರ ಮುಕ್ತ ಸರಕಾರಗಳು ಇಂದು ಅಸ್ತಿತ್ವದಲ್ಲಿಲ್ಲ. 

-ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯಾಧ್ಯಕ್ಷ್ಯ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News