ರಾಜ್ಯದಲ್ಲಿ ಮಳೆ ಅನಾಹುತಗಳಿಗೆ ಮೂವರು ಬಲಿ
ಬೆಂಗಳೂರು: ರಾಜ್ಯದ ವಿವಿಧೆಡೆಗಳಲ್ಲಿ ಶನಿವಾರ ಸಂಜೆ ಅಕಾಲಿಕ ಮಳೆಯಾಗಿದ್ದು, ಮಳೆ ಸಂಬಂಧಿ ಅನಾಹುತಗಳಲ್ಲಿ ಮೈಸೂರು, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಮೃತರಲ್ಲಿ ಬಾಲಕಿಯೊಬ್ಬಳೂ ಸೇರಿದ್ದಾರೆ.
ಎರಡು ಮಂದಿ ಸಿಡಿಲು ಬಡಿದು ಮೃತಪಟ್ಟರೆ, ಶ್ರೀರಂಗಪಟ್ಟಣದಲ್ಲಿ ಚಲಿಸುತ್ತಿದ್ದ ಬೈಕ್‍ಗೆ ತೆಂಗಿನಮರ ಮುರಿದು ಬಿದ್ದ ಘಟನೆಯಲ್ಲಿ ಪೋಷಕರ ಜತೆ ಬೈಕಿನಲ್ಲಿ ಹೋಗುತ್ತಿದ್ದ ಏಳು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.
ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಹನಸೋಗೆ ಗ್ರಾಮದ ಸಿದ್ದಲಿಂಗ ನಾಯಕ (70) ಸಿಡಿಲು ಬಡಿದು ಮೃತಪಟ್ಟರು, ಮಳೆ ಹಿನ್ನೆಲೆಯಲ್ಲಿ ಅವರು ಮರದಡಿ ಆಶ್ರಯ ಪಡೆಯುತ್ತಿದ್ದರು ಎಂದು ಕೆ.ಆರ್.ನಗರ ಪೊಲೀಸರು ಹೇಳಿದ್ದಾರೆ.
ಹಾಸನದಲ್ಲಿ ಇಂಥದ್ದೇ ಘಟನೆಯಲ್ಲಿ 42 ವರ್ಷದ ರೈತ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಹೊಳೆನರಸೀಪುರ ತಾಲೂಕು ಕಲ್ಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂಜೆಯ ವೇಳೆಗೆ ಗ್ರಾಮದ ಮನೆಯೊಂದರ ಹಿಂದೆ ಇದ್ದ ಶೆಡ್‍ನಲ್ಲಿ ಜಾನುವಾರುಗಳನ್ನು ರಕ್ಷಿಸಲು ಮುಂದಾದಾಗ ಸಿಡಿಲಿನ ಹೊಡೆತದಿಂದ ಮೃತಪಟ್ಟರು ಎಂದು ಹಾಸನ ಪೊಲೀಸರು ಹೇಳಿದ್ದಾರೆ.