ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಸುವ ಚಿಂತನೆ ನಡೆಸಿಲ್ಲ: ಸಚಿವ ಜೆ.ಸಿ. ಮಾಧುಸ್ವಾಮಿ

Update: 2022-03-20 11:54 GMT
ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ

ಮೈಸೂರು,ಮಾ.20: ಶಾಲಾ ಪಠ್ಯದಲ್ಲಿ ಯಾವುದೇ ಕಾರಣಕ್ಕೂ ಭಗವದ್ಗೀತೆ ಸೇರಿಸುವ ಪ್ರಯತ್ನ ನಡೆದಿಲ್ಲ,  ಆ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದರು.

ನಗರದಲ್ಲಿ ರವಿವಾರ ಜೆಎಸ್‍ಎಸ್ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಯಾವುದೇ ಕಾರಣಕ್ಕೂ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸುವುದಿಲ್ಲ. ಹಾಗಾಗಿ ಇದರ ಬಗ್ಗೆ ಹೆಚ್ಚು ಚರ್ಚಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಹಿಜಾಬ್ ಗೆ ಅವಕಾಶ ನೀಡುತ್ತಿಲ್ಲ ಎಂದು ಪರೀಕ್ಷೆಗೆ ಗೈರಾದರೆ, ಮತ್ತೆ ಪರೀಕ್ಷೆ ಕೊಡವುದಿಲ್ಲ. ಇದನ್ನು ವಿದ್ಯಾರ್ಥಿಗಳು ಹಾಗೂ ಪೋಷಕರು ಮನಗಾಣಬೇಕು ಎಂದು ಹೇಳಿದ ಅವರು, ಈ ವಿಚಾರದ ಬಗ್ಗೆ ಈಗಾಗಲೇ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ ಎಂದರು.

ಹಿಜಾಬ್ ವಿಚಾರದಲ್ಲಿ ಕೋರ್ಟ್ ತೀರ್ಪು ನೀಡಿದೆ. ಆದರೂ ಪರೀಕ್ಷೆ ಬರೆಯಲ್ಲ ಅಂದ್ರೆ ಏನು ಮಾಡೋಕೆ ಆಗುತ್ತೆ ? ಕೋರ್ಟ್ ತೀರ್ಪನ್ನೇ ಗೌರವಿಸಲ್ಲ ಅಂದ್ರೆ ನ್ಯಾಯಾಂಗದ ಬೆಲೆ ಏನಾಗುತ್ತೆ? ಎಂದು ಪ್ರಶ್ನಿಸಿದರು.

ಅಧಿವೇಶನ ಮೊಟುಕು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಮಾಧುಸ್ವಾಮಿ, ಅಧಿವೇಶನ ಮೊಟಕು ಮಾಡುವ ಪ್ರಶ್ನೆಯೂ ಇಲ್ಲ. 15 ವರ್ಷದ ಬಳಿಕ ಬೇಡಿಕೆ ಮೇಲೆ ಚರ್ಚೆ ಮಾಡಲಾಗಿದೆ. ಎಲ್ಲಾ ಇಲಾಖೆಗಳ ಮೇಲೆ ಬೇಡಿಕೆ ಇಟ್ಟು ಚರ್ಚೆ ಆರಂಭವಾಗಿದೆ. ಹಾಗಾಗಿ ಅಧಿವೇಶನ ಮೊಟಕುಗೊಳಿಸಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.

ಕಾಶ್ಮೀರ್ ಫೈಲ್ ಸಿನಿಮಾ ಹೆಸರಲ್ಲಿ ರಾಜಕೀಯ ಸಲ್ಲದು. ನಮ್ಮ ಇಷ್ಟ ನಾವು ಸಿನಿಮಾ ನೋಡಿದ್ದೇವೆ. ಅವರಿಗೆ ಇಷ್ಟ ಇಲ್ಲ ನೋಡಿಲ್ಲ ಅಷ್ಟೇ. ಸಿನಿಮಾಗಳು ಮಾಧ್ಯಮ ಅಂತಲೇ ನಾನು ಭಾವಿಸಿದ್ದೇನೆ. ನೈಜತೆಯನ್ನ ಬಿಂಬಿಸಿದರೆ ಆ ಭಾವನೆಗಳನ್ನ ಅರ್ಥ ಮಾಡಿಕೊಂಡ್ರೆ ಸರಿ. ಅದನ್ನ ಬಿಟ್ಟು ಅತಿರೇಕದಿಂದ ವರ್ತಿಸಿದರೆ ಎಷ್ಟು ಸರಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News