ಪಾವಗಡ ಬಸ್ ದುರಂತ: ಮೃತರ ಕುಟುಂಬಗಳಿಗೆ ರಾಜ್ಯ ಸರಕಾರ 25 ಲಕ್ಷ ರೂ.ಪರಿಹಾರ ನೀಡಬೇಕು; ಕುಮಾರಸ್ವಾಮಿ
ಬೆಂಗಳೂರು, ಮಾ. 20: ‘ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ ಖಾಸಗಿ ಬಸ್ ದುರಂತದಲ್ಲಿ ಅಸುನೀಗಿದವರಿಗೆ ರಾಜ್ಯ ಸರಕಾರ ಕನಿಷ್ಟ 25 ಲಕ್ಷ ರೂ.ಪರಿಹಾರ ನೀಡಬೇಕು. 5 ಲಕ್ಷ ರೂ.ಕೊಟ್ಟು ಕೈತೊಳೆದುಕೊಳ್ಳುವುದು ಸರಿಯಲ್ಲ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಪಾವಗಡ ಗಡಿ ತಾಲೂಕು. ಹಿಂದುಳಿದ ಪ್ರದೇಶವೂ ಹೌದು. ಈ ಭಾಗದ ಜನರು ಸೂಕ್ತ ಸಾರಿಗೆ ಸೌಕರ್ಯ ಇಲ್ಲದೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಿನ ಶೇ.25ರಷ್ಟು ಗ್ರಾಮಗಳಿಗೆ ಬಸ್ ಸಂಪರ್ಕವೇ ಇಲ್ಲ ಎನ್ನುವ ಮಾಹಿತಿ ಇದೆ. ಸರಕಾರ ಕೂಡಲೇ ಈ ಎಲ್ಲ ಗ್ರಾಮಗಳಿಗೂ ಕೆಎಸ್ಸಾರ್ಟಿಸಿ ಬಸ್ ಸಂಪರ್ಕ ಕಲ್ಪಿಸಬೇಕು' ಎಂದು ಒತ್ತಾಯಿಸಿದ್ದಾರೆ.
‘ಈ ಬಸ್ ದುರಂತಕ್ಕೆ ಆರ್‍ಟಿಓ ಅಧಿಕಾರಿಗಳ ನಿರ್ಲಕ್ಷ್ಯದ ಜತೆಗೆ ಪಾವಗಡದಲ್ಲಿ ಬಸ್ ಡಿಪೋ ಇದ್ದರೂ ಸೂಕ್ತ ಬಸ್ ವ್ಯವಸ್ಥೆ ಮಾಡದ ಕೆಎಸ್ಸಾರ್ಟಿಸಿ ಅಧಿಕಾರಿಗಳ ಉಪೇಕ್ಷೆಯೂ ಎದ್ದು ಕಾಣುತ್ತದೆ. ಸರಕಾರ ಸೂಕ್ತ ತನಿಖೆ ನಡೆಸಿ ಕರ್ತವ್ಯ ಲೋಪ ಎಸಗಿರುವ ಎಲ್ಲ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
‘ತುಮಕೂರು ಜಿಲ್ಲೆಯ ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್ ಅಪಘಾತಕ್ಕೀಡಾಗಿ ಎಂಟು ಪ್ರಯಾಣಿಕರು ಸಾವನ್ನಪ್ಪಿರುವುದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ಅತಿವೇಗ ಹಾಗೂ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂಬ ಮಾಹಿತಿ ಸಿಕ್ಕಿದ್ದು, ಬಸ್ಸಿನ ಟಾಪ್ ಮೇಲೆಯೇ 40ಕ್ಕೂ ಹೆಚ್ಚು ಪ್ರಯಾಣಿಕರು ಕೂತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಇದು ಸಾರಿಗೆ ಇಲಾಖೆ ನಿರ್ಲಕ್ಷ್ಯದ ಪರಮಾವಧಿ' ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
‘ಈ ಬಗ್ಗೆ ಸರಕಾರ ಕಠಿಣ ಕ್ರಮ ವಹಿಸಬೇಕು. ಕರ್ತವ್ಯ ಲೋಪ ಎಸಗಿರುವ ಸಾರಿಗೆ ಇಲಾಖೆ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ದುರಂತದಲ್ಲಿ ಜೀವ ಕಳೆದುಕೊಂಡ ಎಲ್ಲ ಅಮೂಲ್ಯ ಜೀವಗಳಿಗೆ ನನ್ನ ಶ್ರದ್ಧಾಂಜಲಿ ಹಾಗೂ ಎಲ್ಲ ಗಾಯಾಳುಗಳು ಆದಷ್ಟು ಶೀಘ್ರ ಗುಣಮುಖರಾಗಲಿ' ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಹಾರೈಸಿದ್ದಾರೆ.