ಓ ಮೆಣಸೇ....

Update: 2022-03-20 19:30 GMT


ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳದೆ, ಎರಡೂ ಪಕ್ಷಗಳ ವಿರುದ್ಧ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ -ದೇವೇಗೌಡ, ಮಾಜಿ ಪ್ರಧಾನಿ
ಇದೇನು ಚೌಕಾಶಿಯ ಮೊದಲ ಹೆಜ್ಜೆಯೇ?

ಗೊತ್ತಿಲ್ಲದಿರುವ ದಾರಿಯಲ್ಲಿ ಹೋಗುವುದಕ್ಕಿಂತ ಗೊತ್ತಿರುವ ದಾರಿಯಲ್ಲಿ ಹೋಗುವುದು ಉತ್ತಮ -ಸಿ.ಎಂ.ಇಬ್ರಾಹೀಂ, ವಿ.ಪ. ಸದಸ್ಯ
ಅಷ್ಟು ವರ್ಷಗಳ ಬಳಿಕ ಮರಳಿದ್ದರಿಂದ, ಗೊತ್ತಿರುವ ಹಾದಿಯ ಕವಲುಗಳೆಲ್ಲಾ ಮರೆತು ಹೋಗಿವೆ ಎಂದು ಗೊಣಗುತ್ತ ಬೇರೊಂದು ದಾರಿಯತ್ತ ಹೊರಳುವುದು ಯಾವಾಗ?

ಎಂ.ವೀರಪ್ಪ ಮೊಯ್ಲಿ ಸಾಧಕರ ಶಿಲ್ಪಿ ಎಂದು ಹೇಳಿದರೆ ತಪ್ಪಾಗಲಾರದು -ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ
ಸಮಯ ಸಾಧಕರ ಶಿಲ್ಪಿಯೇ?

ಎಲ್ಲರೂ ಮೊದಲು ನಿಮ್ಮನ್ನು ನೋಡಿ ನಗುತ್ತಾರೆ, ಮತ್ತೆ ನಿರ್ಲಕ್ಷಿಸುತ್ತಾರೆ, ಕೊನೆಗೆ ಅನುಸರಿಸುತ್ತಾರೆ ಎಂದು ಗಾಂಧೀಜಿ ಹೇಳಿದ ಮಾತು ನನ್ನ ಜೀವನದಲ್ಲಿ ನಿಜವಾಗಿದೆ -ಎಂ.ವೀರಪ್ಪ ಮೊಯ್ಲಿ, ಮಾಜಿ ಮುಖ್ಯಮಂತ್ರಿ
ನಿಜವಾಗಿರುವುದು ಆ ಪೈಕಿ ಮೊದಲೆರಡು ಹಂತಗಳು ಮಾತ್ರ.

ರಾಜಕಾರಣದಲ್ಲಿ ವೌಲ್ಯಾಧಾರಿತ ಆಶಯ ಕಡಿಮೆಯಾಗುತ್ತಿದ್ದು, ಪ್ರಜಾತಂತ್ರ ಕಲುಷಿತವಾಗುತ್ತಿದೆ -ಬಸವರಾಜ ಹೊರಟ್ಟಿ, ವಿ.ಪ. ಸಭಾಪತಿ
ಕನಿಷ್ಠ ನಿಮ್ಮ ಪಕ್ಷದವರಿಗಾದರೂ ಇದನ್ನು ಮನವರಿಕೆ ಮಾಡಿಸಲು ನಿಮಗೆ ಸಾಧ್ಯವಾಗಿದ್ದರೆ..!

ಇಬ್ಬರು ಸಿದ್ದುಗಳಿಂದ ಕಾಂಗ್ರೆಸ್ ನಾಶವಾಗುತ್ತಿದೆ -ಜಗದೀಶ್ ಶೆಟ್ಟರ್, ಮಾಜಿ ಸಿಎಂ
ಪಂಜಾಬಿನ ಸಿದ್ದು ಈಗಾಗಲೇ ಲಂಘನಕ್ಕೆ ಸಿದ್ಧರಾಗಿರುವುದರಿಂದ ನೀವು, ನಿಮ್ಮ ಪಕ್ಷವನ್ನು ನಾಶಮಾಡಲು ಹೊರಟಿರುವ ಇನ್ನೊಬ್ಬ ಸಿದ್ದುವಿನ ಕುರಿತು ಚಿಂತಿಸಿ.

ಇತ್ತೀಚೆಗೆ ಜನರು ಸಾಧನೆ ನೋಡಿ ಮತ ಹಾಕುವುದನ್ನು ಕಡಿಮೆ ಮಾಡಿದ್ದಾರೆ -ಸಿದ್ದರಾಮಯ್ಯ, ಮಾಜಿ ಸಿಎಂ
ಹೀಗೆಲ್ಲಾ ಸಮಾಧಾನ ಪಟ್ಟುಕೊಳ್ಳುವ ಬದಲು, ಮತ ಗಳಿಸುವ ಮಾರ್ಗಗಳ ಬಗ್ಗೆ ಯೋಚಿಸಿ.

ಗಣಿ, ಶಿಕ್ಷಣ, ಅಬಕಾರಿ, ಗುತ್ತಿಗೆ ಹಾಗೂ ಭೂ ಮಾಫಿಯಾಗಳನ್ನೆಲ್ಲ ಯಾವ ಮುಲಾಜಿಲ್ಲದೆ ಬಗ್ಗು ಬಡಿಯುತ್ತೇವೆ -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಯಾಕೆ? ಅವುಗಳ ಮೇಲೆ ಏಕಸ್ವಾಮ್ಯ ಸ್ಥಾಪಿಸುವುದಕ್ಕಾಗಿಯೇ?

ರಸ್ತೆ ಅಗೆಯದೆ ಯಾವುದೇ ಕೆಲಸ ಆಗಲ್ಲ -ಡಾ.ಅಶ್ವತ್ಥ ನಾರಾಯಣ, ಸಚಿವ
ಹೌದು ಹೊಂಡಗಳ ನಿರ್ಮಾಣವೇ ಗುರಿಯಾದಾಗ ಅಗೆಯುವ ಕೆಲಸವೇ ಪ್ರಧಾನವಾಗಿ ಬಿಡುತ್ತದೆ.

ಕರ್ನಾಟಕದ ಜನತೆ ಡಬ್ಬಾ ಇಂಜಿನ್ ಸರಕಾರಗಳ ದುರಾಡಳಿತದಿಂದ ಬೇಸತ್ತು ಬದಲಾವಣೆ ಬಯಸುತ್ತಿದ್ದಾರೆ -ಸಲೀಂ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ
ಹಾಗಂತ ಅವರು ಬರೀ ಖಾಲಿ ಡಬ್ಬಾಗಳಿಗೇನೂ ಮತ ನೀಡುವುದಿಲ್ಲ.

ರಾಜ್ಯ ವಿಧಾನಸಭೆಗೆ ನಾಳೆಯೇ ಚುನಾವಣೆ ನಡೆದರೂ ಎದುರಿಸಲು ಕಾಂಗ್ರೆಸ್ ಸಿದ್ಧ-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಸೋಲುವುದಕ್ಕೆ ಯಾವುದೇ ಸಿದ್ಧತೆ ಬೇಕಾಗಿಲ್ಲ ಸಿದ್ದರಾಮಣ್ಣ.

   ಒಂದು ಕಾಲದಲ್ಲಿ ದವಸ ಧಾನ್ಯಗಳಿಗೆ ಬೇರೆ ದೇಶಗಳ ಮುಂದೆ ಕೈ ಚಾಚುವ ಸ್ಥಿತಿಯಲ್ಲಿದ್ದ ಭಾರತ ಈಗ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ -ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಈಗ ದೇಶ ಅಂಬಾನಿ, ಅದಾನಿ ಮುಂದೆ ಕೈ ಚಾಚಬೇಕಾಗಿದೆ.

ಯಡಿಯೂರಪ್ಪ ತಮ್ಮ ಪುತ್ರನಿಗೆ ಸಚಿವ ಸ್ಥಾನ ಕೊಡಿಸಲು ಒತ್ತಡ ಹೇರುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರ -ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ಮುಖ್ಯಮಂತ್ರಿ ಸ್ಥಾನಕ್ಕೆ ಒತ್ತಡ ಹಾಕುತ್ತಿರುವುದು ಸತ್ಯಕ್ಕೆ ಹತ್ತಿರ ಎಂದು ಹೇಳುತ್ತಿದ್ದೀರಾ?

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಂಡ ಬಳಿಕ 12 ಸಾವಿರ ಗೋವುಗಳ ರಕ್ಷಣೆ ಮಾಡಲಾಗಿದೆ -ಪ್ರಭು ಚೌಹಾಣ್, ಸಚಿವ
ಈ ಕಾಯ್ದೆಯ ಮೂಲಕ ಗೋವು ಸಾಕುವ ಎಷ್ಟು ರೈತರನ್ನು ಸಾಯಿಸಲಾಗಿದೆ? ಅದರ ಬಗ್ಗೆ ಲೆಕ್ಕ ಇದೆಯೇ?

ಸಂಪುಟದಲ್ಲಿರಲು ನಾನೇನು ಗೂಟ ಹೊಡೆದು ಕುಳಿತಿಲ್ಲ-ಈಶ್ವರಪ್ಪ, ಸಚಿವ
ಎಬ್ಬಿಸಿ ಓಡಿಸುವ ನಿರ್ಧಾರವಾದರೆ ಗೂಟ ಸಹಿತ ಕಿತ್ತೊಗೆಯುವುದು ಕಷ್ಟವೇನಲ್ಲ.

ಈ ದೇಶಕ್ಕೆ ಬ್ರಿಟಿಷರಿಗಿಂತ ಹೆಚ್ಚು ಮೋಸ ಮಾಡಿದ್ದು ಕಾಂಗ್ರೆಸಿಗರು -ಗೋವಿಂದ ಕಾರಜೋಳ, ಸಚಿವ
ಆದ್ದರಿಂದ ಬ್ರಿಟಿಷರನ್ನು ಮತ್ತೆ ಆಮಂತ್ರಿಸುತ್ತೀರಾ?

ಯಡಿಯೂರಪ್ಪರಿಗೆ ವಯಸ್ಸಾಗಿದೆ. ಅವರು ಆರಾಮವಾಗಿ ಮನೆಯಲ್ಲಿರುವುದು ಒಳ್ಳೆಯದು -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಈ ಮೂಲಕ ನೀವು ಎಪ್ಪತ್ತೆರಡರ ಹರೆಯದ ಮೋದಿ ಮಹಾಶಯರಿಗೆ ಸೂಚನೆ ನೀಡುತ್ತಿಲ್ಲ ತಾನೇ?
 
ಮುಖ್ಯಮಂತ್ರಿಯಾದ ಮೇಲೆ ಬಸವರಾಜ ಬೊಮ್ಮಾಯಿಯವರ ಹೃದಯ ಕಲ್ಲಿನಷ್ಟೇ ಕಠಿಣವಾಗಿದೆ -ದೇವನೂರ ಮಹಾದೇವ, ಸಾಹಿತಿ
ಕಲ್ಲಿಗೆ ಕಿವಿ ಇದ್ದಿದ್ದರೆ ಅದು ನಿಮ್ಮ ಈ ಬಗೆಯ ಹೋಲಿಕೆಯನ್ನು ಖಂಡಿತ ಪ್ರಭಟಿಸುತ್ತಿತ್ತು.

ಚುನಾವಣೆ ಸಂದರ್ಭದಲ್ಲಿ ಮಾತ್ರವಲ್ಲ ನಾವು ಎಲ್ಲ ಕಾಲದಲ್ಲೂ ಹಿಂದೂಗಳು -ಸಿ.ಟಿ.ರವಿ, ಶಾಸಕ
ದೇವಸ್ಥಾನದಲ್ಲಿ ಬ್ರಾಹ್ಮಣರ ಪಂಕ್ತಿಯಲ್ಲೊಮ್ಮೆ ಕುಳಿತು ನೋಡಿ.

ನನ್ನ ಜೀವನದಲ್ಲಿ ಕದ್ದುಮುಚ್ಚಿ ಮಾಡಿದ ಯಾವ ಸಂಗತಿಗಳೂ ಇಲ್ಲ -ಕುಮಾರಸ್ವಾಮಿ, ಮಾಜಿ ಸಿಎಂ
ಮುಚ್ಚುಮರೆ ಮಾಡುವುದಕ್ಕೆ ಒಂದಷ್ಟು ಲಜ್ಜೆ ಇರಬೇಕಾಗುತ್ತದೆ.

ಮುಖ್ಯಮಂತ್ರಿ ಮಾಡಿ, ಮುಖ್ಯಮಂತ್ರಿ ಮಾಡಿ ಎಂದು ಯಾರ ಮನೆಗೂ ಹೋಗಿ ಬೇಡುವ ಜಾಯಮಾನ ನನ್ನದಲ್ಲ -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಎಲ್ಲರಿಗೂ ಕೇಳಿಸುವಂತೆ ಈರೀತಿ ಚೀರಾಡುತ್ತಿದ್ದರೆ ಮತ್ತೆ ಮನೆ ಗಳಿಗೆ ಹೋಗಿ ದುಂಬಾಲು ಬೀಳುವ ಅಗತ್ಯವೇ ಎಲ್ಲಿ ಉಳಿದಿರುತ್ತದೆ?

ಪ್ರಧಾನಿ ಮೋದಿ ಪ್ರಚಂಡ ಚೈತನ್ಯ ಮತ್ತು ಕ್ರಿಯಾಶೀಲತೆ ಹೊಂದಿರುವ ವ್ಯಕ್ತಿ -ಶಶಿ ತರೂರು, ಸಂಸದ
ಈ.ಡಿ.ಯವರಿಂದ ಸೂಚನೆಯೇನಾದರೂ ಬಂತೇ?

ವಿಧಾನ ಸಭೆಯಲ್ಲಿ ಖಾಲಿ ಇರುವ ಕುರ್ಚಿಯಲ್ಲಿ ಕುಳಿತವರೇ ಸಚಿವರು ಎಂದು ನಿಯಮಕ್ಕೆ ತಿದ್ದುಪಡಿ ತರಬೇಕು -ರಾಜು ಗೌಡ, ಶಾಸಕ
ಕುರ್ಚಿಗಳಲ್ಲಿ ನಿದ್ರಿಸುವವರು ಸಚಿವರಲ್ಲ ಎಂದು ಘೋಷಿಸಿದರೆ ನಿಮ್ಮ ಭಾಗ್ಯದ ಬಾಗಿಲು ತೆರೆದೀತೇನೋ!

ಮಕ್ಕಳಿಗೆ ವಿದ್ಯೆಗಿಂತ ಮುಖ್ಯವಾದದ್ದು ಬೇರೊಂದಿಲ್ಲ -ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಇದನ್ನು ಅರಿತು ಶಾಲೆಗಳಿಂದ ಕೆಲವು ವಿದ್ಯಾರ್ಥಿನಿಯರನ್ನು ಧಿರಿಸಿನ ಹೆಸರಿನಲ್ಲಿ ಬಹಿಷ್ಕರಿಸಲಾಯಿತೇ?

ಕೋವಿಡ್ ಸಂಪೂರ್ಣವಾಗಿ ಹೋಗಿಲ್ಲ, ಸದ್ಯ ಲಸಿಕೆಯಿಂದ ನಿಯಂತ್ರಿಸಲಾಗಿದೆ -ಡಾ.ಸುಧಾಕರ್, ಸಚಿವ
ಲಸಿಕೆಗೂ ಸಿಗದ ದ್ವೇಷವೆಂಬ ವ್ಯಾಧಿಗೆ ಏನು ಮಾಡೋಣ?

ಜಿಎಸ್‌ಟಿ ನಮ್ಮ ಕೂಸು. ಈ ಬಗ್ಗೆ ಹೆಮ್ಮೆ ಇದೆ. ಆದರೆ ಅದನ್ನು ಜಾರಿಗೊಳಿಸಿದ ರೀತಿ ವಿನಾಶಕಾರಿಯಾಗಿದೆ -ಬಿ.ಕೆ.ಹರಿಪ್ರಸಾದ್, ವಿ.ಪ. ನಾಯಕ
ನಿಮ್ಮ ಇನ್ನೂ ಅನೇಕ ಕೂಸುಗಳು ನೀವು ಬಯಸದ ದಿಕ್ಕಿನಲ್ಲಿ ಬೆಳೆದು ನಿಮಗೆ ಸವಾಲೆಸೆಯುತ್ತಿವೆ.

ಹುಕ್ಕಾ ಬಾರ್ ಮುಚ್ಚುವುದಿಲ್ಲ, ಆದರೆ ಅಲ್ಲಿಗೆ ವಿದ್ಯಾರ್ಥಿಗಳು ಹೋಗುವಂತಿಲ್ಲ -ಆರಗ ಜ್ಞಾನೇಂದ್ರ, ಸಚಿವ
ಅಲ್ಲಲ್ಲಿ ಮಾರಕ ಹೊಂಡಗಳನ್ನು ತೋಡಿಟ್ಟು, ಜೀವ ಬೇಕಾದವರು ಇಲ್ಲಿಗೆ ಬಂದು ಬೀಳಬಾರದು ಎಂದು ಎಚ್ಚರಿಸಿದಂತಿದೆ.

ಕೊಟ್ಟಿರುವ ಖಾತೆಗೂ, ಪಕ್ಷಕ್ಕೂ ನ್ಯಾಯ ಒದಗಿಸದೆ ಪಕ್ಷಕ್ಕೆ ಹೊರೆಯಾಗಿರುವ ಸಚಿವರ ಬಗ್ಗೆ ಮುಖ್ಯಮಂತ್ರಿ ಗಮನಹರಿಸಬೇಕು -ಸಿ.ಟಿ.ರವಿ, ಶಾಸಕ
ನನಗೆ ಸಚಿವ ಸ್ಥಾನ ಕೊಡಿ ಎಂದು ಬಾಯಿ ಬಿಟ್ಟು ಹೇಳುವುದಕ್ಕೆ ಅಷ್ಟೊಂದು ಹಿಂಜರಿಕೆ ಯಾತಕ್ಕೆ?

ಕರ್ನಾಟಕ ಹಾಗೂ ಅದರ ರಾಜಧಾನಿ ಬೆಂಗಳೂರು ಯಾವಾಗಲೂ ನನ್ನ ಹೃದಯಕ್ಕೆ ಬಹಳ ಹತ್ತಿರ -ರಾಜನಾಥ್ ಸಿಂಗ್, ಕೇಂದ್ರ ಸಚಿವ
ಇಲ್ಲಿನ ಖ್ಯಾತ ಹೃದಯಾಲಯಗಳು ಕಾರಣವೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...