ಭಗವದ್ಗೀತೆ ಪಠ್ಯಕ್ರಮದಲ್ಲಿ ಅಳವಡಿಕೆ ಸ್ವಾಗತಾರ್ಹ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Update: 2022-03-20 18:15 GMT

ಹುಬ್ಬಳ್ಳಿ, ಮಾ. 20: ‘ಭಗವದ್ಗೀತೆ ಪಠ್ಯ ಕ್ರಮದಲ್ಲಿ ಅಳವಡಿಸುವುದು ಒಳ್ಳೆಯದು. ಮಕ್ಕಳು ನೈತಿಕ ಶಿಕ್ಷಣ, ಧರ್ಮ ಕಲಿಯಬೇಕು. ಜಾತಿವಾದ ಮಾಡದೆ ಎಲ್ಲರೂ ಸ್ವಾಗತಿಸಬೇಕು, ನಾನು ಅದನ್ನ ಸ್ವಾಗತ ಮಾಡುತ್ತೇನೆ' ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಂದಿಲ್ಲಿ ತಿಳಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈ ವಿಚಾರವನ್ನು ಸ್ವಾಗತ ಮಾಡಿದ್ದರೆ, ಅವರಿಗೆ ಸದ್ಬುದ್ದಿ ಬಂದಿದೆ. ನಾನು ಅದನ್ನೂ ಸ್ವಾಗತ ಮಾಡುತ್ತೇನೆ. ಒಳ್ಳೆಯ ವಿಚಾರಗಳಿಗೆ ಎಲ್ಲರ ಸಹಕಾರ-ಬೆಂಬಲ ಅಗತ್ಯವಿದೆ' ಎಂದು ಇದೇ ವೇಳೆ ತಿಳಿಸಿದರು.

‘ಅಪೂರ್ವ ಪುರಾಣಿಕ ಲವ್ ಜಿಹಾದ್‍ಗೆ ಒಳಗಾಗಿ, ಈ ರೀತಿ ಹಲ್ಲೇಯಾಗಿದೆ. ಕೇವಲ ವಿಚ್ಛೇದನಕ್ಕಾಗಿ ಈ ರೀತಿ ಹಲ್ಲೇ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು. ನಾನೇ ಖುದ್ದು ಅಪೂರ್ವ ಅವರ ಆರೋಗ್ಯ ವಿಚಾರಿಸಿದ್ದು, ಮದುವೆಯಾದ ಮೇಲೂ ಮತ್ತೊಂದು ಮದುವೆಯಾಗುತ್ತಾರೆ ಎಂದರೆ ಇದರೆ ಹಿಂದಿನ ಉದ್ದೇಶ ತಿಳಿಯಬೇಕು' ಎಂದು ಅವರು ಆಗ್ರಹಿಸಿದರು.

‘ದಿ ಕಾಶ್ಮೀರಿ ಫೈಲ್ಸ್' ಚಿತ್ರ ನಿರ್ಮಾಪಕರು ಬಿಜೆಪಿಗೆ ಸೇರಿದವರು ಅಲ್ಲ. ಆದರೆ, ಕೆಲವರು ಬಿಂಬಿಸುತ್ತಿದ್ದಾರೆ. ಇತಿಹಾಸವನ್ನು ಆಧರಿಸಿ ನಿರ್ಮಾಪಕರು ಒಳ್ಳೆಯ ಯಾವುದೇ ಸಿನಿಮಾ ಮಾಡಿದ್ದಾರೆ. ಇಂತಹ ಸಿನಿಮಾಗಳನ್ನು ಯಾರೇ ಮಾಡಿದರೂ ನಾವು ಸ್ವಾಗತಿಸುತ್ತೇವೆ' ಎಂದು ಪ್ರಹ್ಲಾದ್ ಜೋಶಿ ಇದೇ ವೇಳೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News