ವಿದೇಶಿ ಮಾದರಿಯಲ್ಲಿ ಶ್ರೀರಂಗಪಟ್ಟಣ ಅಭಿವೃದ್ಧಿ: ಸಚಿವ ಆನಂದ್ ಸಿಂಗ್

Update: 2022-03-20 18:29 GMT
ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಸಚಿವರು

ಶ್ರೀರಂಗಪಟ್ಟಣ ಮಾ.20: ಶ್ರೀರಂಗಪಟ್ಟಣದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ  ರೂ.16.36 ಕೋಟಿ ಅನುದಾನ ನೀಡಲಾಗಿದ್ದು, ಇನ್ನು ಹೆಚ್ಚಿನ ಅನುದಾನ ತಂದು ಇಲ್ಲಿನ ಪ್ರವಾಸಿ ತಾಣಗಳನ್ನು ವಿದೇಶಿ ಮಾದರಿಯಲ್ಲಿ  ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದರು.

ರವಿವಾರ  ವಿಶ್ವಪ್ರಸಿದ್ದ ಶ್ರೀರಂಗಪಟ್ಟಣದ ಮುಖ್ಯ ಕೋಟೆ ಪ್ರವೇಶದ್ವಾರ, ವೆಲ್ಲೆಸ್ಲಿ ಬ್ರಿಡ್ಜ್, ಕಾವೇರಿ ಸ್ನಾನಘಟ್ಟ, ಓಬೆಲಿಸ್ಕ್ ಸ್ತಂಭ, ಧ್ವನಿ ಬೆಳಕು, ಪಶ್ಚಿಮವಾಹಿನಿಯ ಗಾಂಧಿ ಚಿತಾಭಸ್ಮ ಸ್ಮಾರಕ ಸೇರಿದಂತೆ ವಿವಿಧ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಅಭಿವೃದ್ದಿ ಕೆಲಸಗಳಲ್ಲಿ ನಾನು ಹೇಳಿ ಮಾಡುವವನಲ್ಲ, ನಾನು ಕೆಲಸ ಮಾಡುವ ರೀತಿಯೇ ಬೇರೆ ನಾನು ವಹಿಸಿಕೊಂಡಿರುವ ಜವಾಬ್ದಾರಿಯಲ್ಲಿ ಪ್ರಮಾಣಿಕವಾಗಿ ಸೇವೆ ಸಲ್ಲಿಸುವ ಮನಸ್ಸಿದ್ದು, ಶ್ರೀರಂಗಪಟ್ಟಣದ ಪ್ರವಾಸಿ ತಾಣಗಳ ಮೇಲೆ ಬೆಳಕು ಚೆಲ್ಲಿ ಅಭಿವೃದ್ದಿ ಮಾಡುವ ಜವಾಬ್ದಾರಿ ನನ್ನದು ಎಂದರು.

ವಿಧಾನಸಭೆಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಇಲ್ಲಿನ  ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಪ್ರಸ್ತಾಪಿಸಿದ್ದರು. ಈ ವೇಳೆ ನಿಗದಿತ ಉದ್ದೇಶಕ್ಕೆ ಬಳಕೆ ಮಾಡಬೇಕಾದ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ಸರ್ಕಾರದ ಹಣ ಪೊಲಾಗಿದೆ ಎಂದು ಆರೋಪಿಸಿದ್ದರು. 

ಈ ಹಿನ್ನಲೆಯಲ್ಲಿ ಎರಡು ದಿನದಲ್ಲೇ ಪುರಾತತ್ವ, ಪುರಾತತ್ವ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ.  ಶಾಸಕ ರವೀಂದ್ರ ಶ್ರೀಕಂಠಯ್ಯ ಅವರೊಂದಿಗೆ ಚರ್ಚಿಸಿ ಕೈಗೊಳ್ಳಬೇಕಿರುವ ಅಭಿವೃದ್ದಿ, ಕುಂದುಕೊರತೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಶ್ರೀರಂಗಪಟ್ಟಣದ ಈ ಹಿಂದೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ರೂ.16.36 ಕೋಟಿ ಅನುದಾನ ತಂದಿದ್ದು, ಕೊರೋನ ವ್ಯಾಪಿಸಿದ ಕಾರಣ ಇಲಾಖೆ ಸರಿಯಾಗಿ ಬಳಕೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈಗ ತಡೆಯಾಗಿದ್ದ ಹಣದೊಂದಿಗೆ ತುರ್ತು ಬಿಡುಗಡೆ ಮಾಡುತ್ತಿದ್ದು, ಇಲ್ಲಿನ ದೋಣಿ ವಿಹಾರಕ್ಕೆ ರೂ.5 ಕೋಟಿ ಸೇರಿದಂತೆ ಇನ್ನು ಹೆಚ್ಚಿನ ಅನುದಾನವನ್ನು ಪ್ರವಾಸೋದ್ಯಮ ಇಲಾಖೆಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೋಟೆ ಕಂದಕಗಳಲ್ಲಿ ಬೆಳೆದಿರುವ ಗಿಡಗಂಟಿಗಳ ತೆರವು ಸೇರಿದಂತೆ ಇಲ್ಲಿನ ಡೆಲ್ಲಿ ಗೇಟ್, ಓಬೆಲಿಸ್ಕ್ ಸ್ತಂಭ, ಸ್ನಾನಘಟ್ಟ ಸೇರಿದಂತೆ ಇಲ್ಲಿನ ಪುರಾತನ ಸ್ಮಾರಕಗಳನ್ನು ವೆನ್ನಿಸ್ ಮಾದರಿ ಅಭಿವೃದ್ದಿಗೊಳಿಸಲಾಗುತ್ತದೆ. ಈಗಾಗಲೇ ತಡವಾಗಿರುವ ಕಾಮಗಾರಿಯನ್ನು ಶೀಘ್ರ ಮರುಚಾಲನೆ ನೀಡಲಾಗುವುದು ಎಂದು ಇದೇ ವೇಳೆ ತಿಳಿಸಿದರು. 

ಈ ವೇಳೆ ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ,ಪುರಾತತ್ವ ಇಲಾಖೆ ಆಯುಕ್ತೆ ವಿ.ಆರ್.ಪೂರ್ಣಿಮಾ, ಪಾಂಡವಪುರ ಉಪ ವಿಭಾಗಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ತಹಸೀಲ್ದಾರ್ ಶ್ವೇತಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News