ಹಿಜಾಬ್ ತೀರ್ಪು ಸಂಬಂಧ ಬಂದ್‍ಗೆ ಕರೆ ಹಿನ್ನೆಲೆ: ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಕೆ
Update: 2022-03-21 17:09 IST
ಬೆಂಗಳೂರು, ಮಾ.21: ಹಿಜಾಬ್ ತೀರ್ಪು ಸಂಬಂಧ ಇತ್ತೀಚೆಗೆ ಬಂದ್‍ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಬಂದ್‍ಗೆ ಕರೆ ನೀಡಿದ್ದ ವಿಚಾರವೂ ನ್ಯಾಯಾಂಗ ನಿಂದನೆಯಾಗಿದೆ ಎಂದು ಹೈಕೋರ್ಟ್ ವಕೀಲ ಅಮೃತೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಮ್ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಅಸಂವಿಧಾನಿಕವಾಗಿದ್ದು, ಇದು ನ್ಯಾಯಾಂಗ ನಿಂದನೆಯಾಗಿದೆ ಎಂದು ತಿಳಿಸಿದರು.
ತೀರ್ಪು ಹಿನ್ನೆಲೆ ಹಲವು ಸಂಘಟನೆಗಳ ಸದಸ್ಯರು, ಕೆಲ ವ್ಯಕ್ತಿಗಳನ್ನು ಟೀಕಿಸುವ ಭರದಲ್ಲಿ ನ್ಯಾಯಾಂಗ ವ್ಯವಸ್ಥೆ ವಿರುದ್ಧ ಮಾತನಾಡುತ್ತಿದ್ದಾರೆ. ನ್ಯಾಯಮೂರ್ತಿಗಳಿಗೆ ಒತ್ತಡ ಬಂದಿತ್ತು ಎಂಬಂತಹ ಮಾತುಗಳು ಕೇಳಿಬಂದಿವೆ. ತೀರ್ಪು ನೀಡಿದ ನ್ಯಾಯಮೂರ್ತಿಗಳಿಗೂ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಬೆಳವಣಿಗೆ ಸರಿಯಲ್ಲ ಎಂದು ವಕೀಲರು ಹೇಳಿದರು.