×
Ad

ಪಾವಗಡ ಬಸ್ ದುರಂತ: ಮೃತಪಟ್ಟವರ ಕುಟುಂಬಗಳಿಗೆ 25 ಲಕ್ಷ ರೂ.ಪರಿಹಾರಕ್ಕೆ ಯು.ಟಿ.ಖಾದರ್ ಆಗ್ರಹ

Update: 2022-03-21 17:14 IST

ಬೆಂಗಳೂರು, ಮಾ. 21: ‘ತುಮಕೂರು ಜಿಲ್ಲೆಯ ಪಾವಗಡದ ಪಳವಳ್ಳಿ ಕಟ್ಟೆ ಕೆರೆಯ ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರ ಕುಟುಂಬಕ್ಕೆ 25 ಲಕ್ಷ ರೂ. ಗಾಯಾಳುಗಳಿಗೆ 10 ಲಕ್ಷ ರೂ.ಹಾಗೂ ಸಣ್ಣ-ಪುಟ್ಟ ಗಾಯಗಳಾದವರಿಗೆ 5 ಲಕ್ಷ ರೂ.ಪರಿಹಾರ ನೀಡಬೇಕು. ಜೊತೆಗೆ ಈ ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು' ಎಂದು ವಿಧಾನಸಭೆ ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಒತ್ತಾಯಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಅವರು, ‘ಈ ಘಟನೆ ಹಿನ್ನೆಲೆಯಲ್ಲಿ ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದು, ಒಬ್ಬರು ಖಾಸಗಿ ಬಸ್ ಪರವಾನಿಗೆ ರದ್ದು ಮಾಡಲಾಗುವುದು ಎಂದರೆ, ಮತ್ತೊಬ್ಬರು ಬಸ್ ಟಾಪ್ ಮೇಲೆ ಕುಳಿತುಕೊಂಡರೆ ಮೊಕದ್ದಮೆ ಹೂಡಲಾಗುವುದು' ಎಂದು ಹೇಳಿದ್ದಾರೆ.

‘ರಸ್ತೆ ಅಪಘಾತ ಸಂಭವಿಸಿದ ಮಾರ್ಗದಲ್ಲಿ ಈ ಹಿಂದೆ 80ಕ್ಕೂ ಹೆಚ್ಚು ಕೆಎಸ್ಸಾರ್ಟಿಸಿ ಬಸ್ ಸಂಚಾರ ಮಾಡುತ್ತಿದ್ದು, ಇದೀಗ 30-40 ಸರಕಾರಿ ಬಸ್ ಮಾತ್ರ ಸಂಚರಿಸುತ್ತಿವೆ. ಆದರೆ 150ಕ್ಕೂ ಹೆಚ್ಚು ಖಾಸಗಿ ಬಸ್ ಓಡಾಡುತ್ತಿವೆ. ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಇಲ್ಲದೆ, ಶಾಲೆ-ಕಾಲೇಜಿಗೆ ತೆರಳುವ ಮಕ್ಕಳು ಬಸ್‍ನ ಟಾಪ್‍ನಲ್ಲಿ ಪ್ರಯಾಣ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ' ಎಂದು ಟೀಕಿಸಿದರು.

‘ಬಸ್ ದುರಂತ ನಡೆದ ಸ್ಥಳಕ್ಕೆ ಖುದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆರಳಬೇಕಿತ್ತು. ಆದರೆ, ಆರ್ ಆರ್ ಆರ್ ಸಿನಿಮಾ ಟ್ರೇಲರ್ ರಿಲೀಸ್‍ಗೆ ಹೋಗಿದ್ದರು. ಬಡವರು, ಶಾಲೆ-ಕಾಲೇಜುಗಳಿಗೆ ತೆರಳುವ ಸಾರ್ವಜನಿಕ ಪ್ರಯಾಣಿಕರಿಗೆ ಸರಕಾರ ಸೂಕ್ತ ರೀತಿಯಲ್ಲಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಖಾದರ್ ಆಗ್ರಹಿಸಿದರು.

ನಿರ್ಲಕ್ಷ್ಯ ಅಧಿಕಾರಿಗಳ ಅಮಾನತ್ತು: ‘ಬಸ್ ದುರಂತಕ್ಕೆ ಸಂಬಂಧಿಸಿದಂತೆ ಖುದ್ದು ನಾನೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಉನ್ನತ ಮಟ್ಟದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಅಪಘಾತ ಆಗುತ್ತಿರುವ ಸ್ಥಳವನ್ನು ‘ಬ್ಲ್ಯಾಕ್ ಸ್ಟಾಟ್' ಎಂದು ಪರಿಗಣಿಸಲಾಗುವುದು. ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ಅಪಘಾತಕ್ಕೆ ಯಾರು ಕಾರಣ ಎಂದು ಚರ್ಚೆ ಮಾಡಿದ್ದೇವೆ' ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಉತ್ತರಿಸಿದರು.

‘ಈಗಾಗಲೇ ಅಪಘಾತದಲ್ಲಿ ಮೃತಪಟ್ಟವರಿಗೆ ಸರಕಾರದಿಂದ 5 ಲಕ್ಷ ರೂ.ಪರಿಹಾರ ಜೊತೆಯಲ್ಲಿ ವೈಯಕ್ತಿಕವಾಗಿ ನಾನು 1ಲಕ್ಷ ರೂ.ನೀಡಿದ್ದೇನೆ. ಗಾಯಗೊಂಡವರಿಗೆ 50 ಸಾವಿರ ರೂ.ಹಣ ನೀಡಲಾಗಿದೆ. ಗಾಯಾಳುಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ಚಾಲಕನ ಅಜಾಗರೂಕತೆ ಮತ್ತು ಅತಿವೇಗವೇ ಕಾರಣ ಎಂದು ಗೊತ್ತಾಗಿದೆ. ಅಲ್ಲದೆ, ಆ ವಾಹನ ಎಲ್ಲ ರೀತಿಯಲ್ಲಿಯೂ ಸುಸ್ಥಿತಿಯಲ್ಲಿತ್ತು ಎಂದು ತಿಳಿದು ಬಂದಿದೆ. ಈ ಘಟನೆಗೆ ಕಾರಣ ಮತ್ತು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ' ಎಂದು ಮಾಹಿತಿ ನೀಡಿದರು.

ಖಜಾನೆಯ ಎಲ್ಲ ಹಣವು ಸಾಲುವುದಿಲ್ಲ

‘ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಲು ಸರಕಾರಿ ಖಜಾನೆಯಲ್ಲಿರುವ ಎಲ್ಲ ಹಣವೂ ಸಾಕಾಗುವುದಿಲ್ಲ. ಆದರೆ, ಆರ್‍ಟಿಓ, ಸಾರಿಗೆ ಇಲಾಖೆಯಲ್ಲಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಖಾಸಗಿ ಬಸ್ ಸಂಚರಿಸುವ ಮಾರ್ಗದಲ್ಲಿ ಕೆಎಸ್ಸಾರ್ಟಿಸಿ ಬಸ್ ಹಾಕುವುದು ಮತ್ತು ಖಾಸಗಿ ಬಸ್‍ಗಳ ಸುರಕ್ಷತೆಯ ಬಗ್ಗೆ ದೃಢೀಕರಣ ಪತ್ರ ನೀಡುವ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು. ಇದರ ಹಿಂದಿರುವ ಸ್ಥಾಪಿತ ಹಿತಾಸಕ್ತಿಗಳ ನಿಯಂತ್ರಣಕ್ಕೆ ಕ್ರಮ ವಹಿಸಬೇಕು'

-ಕೆ.ಆರ್.ರಮೇಶ್ ಕುಮಾರ್ ಮಾಜಿ ಸ್ಪೀಕರ್

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News