ಆಗಸ್ಟ್ ನಲ್ಲಿ ಕೋವಿಡ್ 4ನೇ ಅಲೆ ಸಾಧ್ಯತೆ: ಸಚಿವ ಡಾ.ಕೆ.ಸುಧಾಕರ್
ಬೆಂಗಳೂರು, ಮಾ.21: ದೇಶದಲ್ಲಿ ಆಗಸ್ಟ್ ತಿಂಗಳಿನಲ್ಲಿ ಮತ್ತೊಮ್ಮೆ ಕೋವಿಡ್ ಸೋಂಕು ಸಂಬಂಧ ನಾಲ್ಕನೆ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಆತಂಕ ವ್ಯಕ್ತಪಡಿಸಿದರು.
ಸೋಮವಾರ ವಿಧಾನ ಪರಿಷತ್ತಿನ ಕಲಾಪದ ಶೂನ್ಯ ವೇಳೆಯಲ್ಲಿ ಬಿಜೆಪಿಯ ಶಿಶಿಲ್ ನಮೋಷಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್ ರೂಪಾಂತರ ಉಪತಳಿ ಬಿಎ-2 ಪಿಲಿಫೈನ್ಸ್‍ನಲ್ಲಿ ಕಾಣಿಸಿಕೊಂಡು ನಂತರ 40 ದೇಶಗಳಲ್ಲಿ ಕಾಣಿಸಿಕೊಂಡಿದೆ. ಈ ಮೊದಲು ಮೂರನೇ ಅಲೆ ಕಾಣಿಸಿಕೊಳ್ಳುವ ಮುನ್ಸೂಚನೆ ನೀಡಿದ ಸಂಸ್ಥೆಯೇ ಇದೀಗ 4ನೇ ಅಲೆ ಆಗಸ್ಟ್‍ನಿಂದ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ ಎಂದರು.
ಆಗಸ್ಟ್‍ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿರುವ 4ನೆ ಅಲೆಯ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು, ರಾಜ್ಯದಲ್ಲಿ ಲಸಿಕಾ ಅಭಿಯಾನಕ್ಕೆ ವೇಗ ನೀಡಲಾಗಿದೆ. ಹೀಗಾಗಿ 4ನೆ ಅಲೆ ಎದುರಾದರೂ ಸಾರ್ವಜನಿಕರು ಭಯ, ಆತಂಕ ಪಡುವ ಅಗತ್ಯವಿಲ್ಲ ಎಂದು ನುಡಿದರು.
1.25 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಲಾಗಿದೆ. ಇದರ ಜತೆಗೆ ಹೆಚ್ಚುವರಿ ಲಸಿಕೆಯನ್ನು ನೀಡಲಾಗುತ್ತಿದ್ದು, ಕಳೆದ ವಾರದಿಂದ 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಕೊಡಿಸಲು ಪೋಷಕರನ್ನು ಮನವೊಲಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಲಸಿಕೆ ಹಾಕಿಸಿಕೊಳ್ಳುವುದರಿಂದ ಕೋವಿಡ್ ಸೋಂಕು ಬರದಂತೆ ತಡೆಯಲು ಸಹಕಾರಿಯಾಗಲಿದೆ. ಜತೆಗೆ ಜನರು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು. ಒಳಾಂಗಣದಲ್ಲಿ ಮಾಸ್ಕ್ ಹಾಕಿಕೊಳ್ಳಬೇಕು ಎಂದು ಅವರು ಹೇಳಿದರು.