ವಿಚಾರಣೆಗೆ ತಡೆಯಾಜ್ಞೆ ನೀಡಿದ್ದಾಗ ಪಾಸ್‍ಪೋರ್ಟ್ ನವೀಕರಣಕ್ಕೆ ಅನುಮತಿ ಅನಗತ್ಯ: ಹೈಕೋರ್ಟ್ ಆದೇಶ

Update: 2022-03-21 12:58 GMT

ಬೆಂಗಳೂರು, ಮಾ.21: ಅಪರಾಧ ಪ್ರಕರಣಗಳಲ್ಲಿ ಅಧೀನ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದಾಗ ಪಾಸ್‍ ಪೋರ್ಟ್ ನವೀಕರಣಕ್ಕೆ ಮತ್ತೆ ವಿಚಾರಣಾ ನ್ಯಾಯಾಲಯದ ಅನುಮತಿ ಅನಗತ್ಯ ಎಂದು ಹೈಕೋರ್ಟ್ ಆದೇಶಿಸಿದೆ.

ಅಲ್ಲದೆ, ಪ್ರಕರಣ ಬಾಕಿ ಇರುವ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರಿಗೆ  ಪಾಸ್‍ ಪೋರ್ಟ್ ನವೀಕರಿಸಲು ನಿರಾಕರಿಸಿ ಪ್ರಾದೇಶಿಕ ಪಾಸ್‍ ಪೋರ್ಟ್ ಅಧಿಕಾರಿ(ಆರ್‍ಪಿಒ) ನೀಡಿದ್ದ ಹಿಂಬರಹವನ್ನು ರದ್ದುಪಡಿಸಿರುವ ನ್ಯಾಯಪೀಠ, ಮಹಿಳೆ ಸಲ್ಲಿಸಿರುವ ಪಾಸ್‍ ಪೋರ್ಟ್ ನವೀಕರಣ ಮನವಿಯನ್ನು ಒಂದೂವರೆ ತಿಂಗಳಲ್ಲಿ ಪರಿಗಣಿಸುವಂತೆ ಆರ್‍ಪಿಒಗೆ ನಿರ್ದೇಶನ ನೀಡಿದೆ.

ಬೆಂಗಳೂರಿನ ಕಸ್ತೂರಿ ರಾಜುಪೇಟ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಈ ಆದೇಶ ಮಾಡಿದೆ. ಅಲ್ಲದೆ, ನವೀಕರಿಸಿದ ಪಾಸ್‍ ಪೋರ್ಟ್ ವಿತರಿಸಿದರೂ ಅಥವಾ ವಿತರಿಸದಿದ್ದರೂ ಸಂಬಂಧಪಟ್ಟ ಕ್ರಿಮಿನಲ್ ಕೋರ್ಟ್‍ನ ಅನುಮತಿಯಿಲ್ಲದೆ ಅರ್ಜಿದಾರ ಮಹಿಳೆ ವಿದೇಶ ಪ್ರಯಾಣ ಮಾಡುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಕ್ರಿಮಿನಲ್ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ಇಲ್ಲದಿದ್ದಾಗ ಮಾತ್ರ ವಿಚಾರಣಾ ನ್ಯಾಯಾಧೀಶರು ತಮ್ಮ ಕೆಲಸ ಮಾಡಲು ಸ್ವತಂತ್ರರಾಗಿರುತ್ತಾರೆ. ಆದರೆ, ಹೈಕೋರ್ಟ್ ತಡೆ ನೀಡಿರುವ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಅನುಮತಿ ತರುವಂತೆ ಸೂಚಿಸುವುದು ಜನರಿಂದ ಅಸಾಧ್ಯವಾದ ಕಾರ್ಯ ಮಾಡಿಸಿದಂತಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು: ಪಾಸ್‍ ಪೋರ್ಟ್ ನವೀಕರಣಕ್ಕೆ ಅರ್ಜಿದಾರರು ಮನವಿ ಸಲ್ಲಿಸಿದ್ದರು. ಆರ್‍ಪಿಒ ಅದನ್ನು ತಿರಸ್ಕರಿಸಿ 2021ರ ಸೆ. 6ರಂದು ಹಿಂಬರಹ ನೀಡಿ, ಪಾಸ್‍ ಪೋರ್ಟ್ ವಿತರಿಸಬೇಕೆಂದರೆ ವಿಚಾರಣಾ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಬಾಕಿ ಇರುವ ಪ್ರಕರಣ ಮುಕ್ತಾಯಗೊಂಡಿರುವ ಆದೇಶ ಪ್ರತಿ ಸಲ್ಲಿಸಬೇಕು ಅಥವಾ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದ ಅನುಮತಿ ಪತ್ರ ಸಲ್ಲಿಸಬೇಕು. ಆ ಪಾಸ್‍ ಪೋರ್ಟ್ ನ ಅವಧಿಯು 1993ರ ಅಧಿಸೂಚನೆಯ ನಿಯಮಗಳಿಗೆ ಒಳಪಟ್ಟಿರಲಿದೆ ಎಂದು ಹೇಳಿತ್ತು.

ಅದನ್ನು ಪ್ರಶ್ನಿಸಿ ಕಸ್ತೂರಿ ರಾಜುಪೇಟ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ವಿರುದ್ಧ ಬೆಂಗಳೂರಿನ 17ನೆ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಿ ಹೈಕೋರ್ಟ್ 2020ರ ಡಿ. 10ರಂದು ಮಧ್ಯಂತರ ಆದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News