ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆ ಮಂಡನೆ: ಯಾರೆಲ್ಲಾ ಪಂಚಾಯತ್ ಸದಸ್ಯನಾಗಲು ಅನರ್ಹ?
ಬೆಂಗಳೂರು, ಮಾ. 21: ‘ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಜನಸಂಖ್ಯೆ ಮಿತಿ ನಿಗದಿ ಮಾಡುವ, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಾಗಲು ಅರ್ಹತೆಗಳನ್ನು ಬಿಗಿಗೊಳಿಸುವ ಸಂಬಂಧದ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ವಿಧೇಯಕ-2022' ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.
ಸೋಮವಾರ ವಿಧಾನಸಭೆಯ ಶಾಸನ ರಚನೆ ಕಲಾಪದಲ್ಲಿ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕ'ವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಂಡಿಸಿದರು. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಜನಸಂಖ್ಯೆಯನ್ನು ನಿಗದಿ ಮಾಡಲಾಗುತ್ತದೆ. ಅಲ್ಲದೆ, ಜನಸಂಖ್ಯೆಯ ಅನುಪಾತದ ಉದ್ದೇಶಕ್ಕಾಗಿ ಮಲೆನಾಡು ಪ್ರದೇಶದಿಂದ ತರೀಕೆರೆ, ಕಡೂರು ಮತ್ತು ಅಜ್ಜಂಪುರ ತಾಲೂಕುಗಳನ್ನು ವಿನಾಯಿತಿ ಪ್ರಸ್ತಾಪ ಮಾಡಲಾಗಿದೆ.
‘ಕೇಂದ್ರ ಅಥವಾ ರಾಜ್ಯ ಸರಕಾರದ ಸೇವೆಯಿಂದ ಕಡ್ಡಾಯ ನಿವೃತ್ತಿಗೆ ಒಳಗಾದವರು ಅಥವಾ ವಜಾಗೊಂಡಿರುವ ವ್ಯಕ್ತಿ ಸಹಕಾರ ಸಂಘ ಮತ್ತು ಸಂಸ್ಥೆಗಳ ಸೇವೆಯಿಂದ ನಿವೃತ್ತರಾಗಿರುವವರು ಅಥವಾ ವಜಾಗೊಂಡವರು, ಸಹಕಾರ ಸಂಘ ಅಥವಾ ಸಂಸ್ಥೆಯ ಅಧ್ಯಕ್ಷ-ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಲಾಗಿರುವ ವ್ಯಕ್ತಿ ಈ ಮೂರು ಹಂತದ ಪಂಚಾಯಿತಿ ವ್ಯವಸ್ಥೆಯ ಸದಸ್ಯನಾಗಲು ಅನರ್ಹ. ಇವು ವಿಧೇಯಕದ ಪ್ರಮುಖ ತಿದ್ದುಪಡಿಗಳು.
ಅಲ್ಲದೆ, ತಿದ್ದುಪಡಿಯಿಂದಾಗಿ ಜಿಲ್ಲಾ ಯೋಜನಾ ಸಮಿತಿಯ ಅಧ್ಯಕ್ಷರಾಗಿ ಸಂಬಂಧಿಸಿದ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗುತ್ತದೆ. ಸಂಬಂಧಪಟ್ಟ ನಗರಸಭೆ, ಪಾಲಿಕೆ ಅಥವಾ ಆಯಾ ಜಿಲ್ಲಾ ಕೇಂದ್ರದ ಪೌರಾಡಳಿತದ ಮೇಯರ್/ಅಧ್ಯಕ್ಷರು ಜಿಲ್ಲಾ ಯೋಜನಾ ಸಮಿತಿಯ ಉಪಾಧ್ಯಕ್ಷರಾಗಿರಲಿದ್ದಾರೆ. ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನಾ ಮತ್ತು ಅಭಿವೃದ್ಧಿ ಸಮಿತಿಯ ವಿಶೇಷ ಆಹ್ವಾನಿತರನ್ನಾಗಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರನ್ನು ನಿಯುಕ್ತಿಗೊಳಿಸುವ ಮಹತ್ವದ ತಿದ್ದುಪಡಿಯನ್ನು ಉದ್ದೇಶಿತ ವಿಧೇಯಕದಲ್ಲಿಉಲ್ಲೇಖಿಸಲಾಗಿದೆ.