ನಗರಸಭೆ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿ 'ಕಾಶ್ಮೀರ್ ಫೈಲ್ಸ್' ಚಿತ್ರ ವೀಕ್ಷಣೆಗೆ ತೆರಳಿದ ಪೌರಾಯುಕ್ತ, ಸಿಬ್ಬಂದಿ:ಆರೋಪ
ಚಿಕ್ಕಮಗಳೂರು, ಮಾ.21: ನಗರಸಭೆ ಅಧ್ಯಕ್ಷರು, ಆಡಳಿತ ಪಕ್ಷದ ಸದಸ್ಯರು ಹಾಗೂ ಆಯುಕ್ತರ ಸೇರಿದಂತೆ ಅಧಿಕಾರಿ, ಸಿಬ್ಬಂದಿ ಸೋಮವಾರ ನಗರದ ಚಿತ್ರಮಂದಿರವೊಂದರಲ್ಲಿ ಪ್ರದರ್ಶನಗೊಳ್ಳುತ್ತಿರುವ ಕಾಶ್ಮೀರ್ ಫೈಲ್ಸ್ ಸಿನೆಮಾ ನೋಡಲು ತೆರಳಿದ್ದು, ಇದರಿಂದ ಇಡೀ ನಗರಸಭೆ ಕಚೇರಿ ಖಾಲಿಯಾಗಿ ಸಾರ್ವಜನಿಕರು ಸಕಾಲದಲ್ಲಿ ಸೇವೆ ಸಿಗದೇ ತೊಂದರೆ ಅನುಭವಿಸಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯರು ಜಿಲ್ಲಾ ಮುಖಂಡರ ನೇತೃತ್ವದಲ್ಲಿ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಹಾಗೂ ಮುಖಂಡರಾದ ಮಂಜೇಗೌಡ, ಶಿವಾನಂದಸ್ವಾಮಿ, ರವೀಶ್ ಕ್ಯಾತನಬೀಡು ನೇತೃತ್ವದಲ್ಲಿ ನಗರಸಭೆಯ ಕಾಂಗ್ರೆಸ್ ಪಕ್ಷದ ಸದಸ್ಯರು ಸೋಮವಾರ ನಗರಸಭೆ ಕಚೇರಿಗೆ ಆಗಮಿಸಿದ್ದು, ಈ ವೇಳೆ ಕಚೇರಿ ಅಧಿಕಾರಿ, ಸಿಬ್ಬಂದಿ ಇಲ್ಲದೇ ಖಾಲಿ ಖಾಲಿಯಾಗಿತ್ತು. ಈ ಸಂಬಂಧ ಮುಖಂಡರು ಕಚೇರಿಯಲ್ಲಿದ್ದ ಕೆಲ ಸಿಬ್ಬಂದಿಯನ್ನು ವಿಚಾರಿಸಿದಾಗ ನಗರಸಭೆ ಅಧ್ಯಕ್ಷರು, ಆಯುಕ್ತರು ಸೇರಿದಂತೆ ಆಡಳಿತ ಪಕ್ಷ ಬಿಜೆಪಿಯ ಸದಸ್ಯರು ಹಾಗೂ ಸಿಬ್ಬಂದಿ ಕಾಶ್ಮೀರ್ ಫೈಲ್ಸ್ ಸಿನೆಮಾ ವೀಕ್ಷಣೆಗೆ ತೆರಳಿರುವುದು ತಿಳಿದು ಬಂದಿದೆ.
ಇದರಿಂದ ಕುಪಿತರಾದ ಕಾಂಗ್ರೆಸ್ ಮುಖಂಡರು ನಗರಸಭೆ ಕಚೇರಿ ಎದುರು ಕುಳಿತು ಧರಣಿ ನಡೆಸಿ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹಾಗೂ ಪೌರಾಯುಕ್ತ ಬಸವರಾಜು ಅವರು ಸಾರ್ವಜನಿಕರ ಕೆಲಸ ಮರೆತು ಕಚೇರಿಯ ಅಧಿಕಾರಿ, ಸಿಬ್ಬಂದಿಯೊಂದಿಗೆ ಸಿನೆಮಾ ವೀಕ್ಷಣೆ ಹೋಗುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ. ಕಚೇರಿಯ ಹಾಜರಾತಿ ಪುಸ್ತಕಕ್ಕೆ ಅಧಿಕಾರಿ, ಸಿಬ್ಬಂದಿಯಿಂದ ಸಹಿ ಮಾಡಿಸಿ ಸಿನೆಮಾ ತೋರಿಸಲು ಕರೆದೊಯ್ಯಲಾಗಿದೆ. ಈ ಮೂಲಕ ನಗರಸಭೆ ಅಧ್ಯಕ್ಷ ಹಾಗೂ ಪೌರಾಯುಕ್ತರು ಸಾರ್ವಜನಿಕರ ಕೆಲಸ ಕಾರ್ಯ ಮಾಡದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಧಿಕ್ಕಾರದ ಘೋಷಣೆ ಕೂಗಿದ್ದಲ್ಲದೇ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾಣೆಯಾಗಿದ್ದಾರೆ, ಇವರನ್ನು ಹುಡುಕಿ ಕೊಡಿ ಎಂದು ಘೋಷಣೆಗಳನ್ನು ಕೂಗಿದರು.
ಕಾಂಗ್ರೆಸ್ ಮುಖಂಡರ ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್, ಅಧಿಕಾರಿ, ಸಿಬ್ಬಂದಿಯನ್ನು ಕಂದಾಯ ವಸೂಲಿಗೆ ಕಳಿಸಲಾಗಿದೆ. ಪೌರಕಾರ್ಮಿಕರ ಅಪೇಕ್ಷೆಯ ಮೇರೆಗೆ ಕಾರ್ಮಿಕರನ್ನು ಮಾತ್ರ ಸಿನಿಮಾ ವೀಕ್ಷಣೆಗೆ ಕಳಿಸಲಾಗಿದೆ ಎಂದು ಸಮಜಾಯಿಸಿ ನೀಡಿದರು. ಈ ವೇಳೆ ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು.
ಅಧಿಕಾರಿ ಸಿಬ್ಬಂದಿ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿರುವ ಸಿಬ್ಬಂದಿ ಕಚೇರಿಯಲ್ಲಿಲ್ಲ. ಎಲ್ಲರನ್ನೂ ಸಿನೆಮಾ ತೋರಿಸಲು ಕರೆದೊಯ್ಯಲಾಗಿದೆ. ಆದರೆ ಪೌರಾಯುಕ್ತರು ಅಧಿಕಾರಿ, ಸಿಬ್ಬಂದಿ ಕಂದಾಯ ವಸೂಲಿಗೆ ಹೋಗಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ. ಬೆಳಗ್ಗೆಯಿಂದ ಸಾರ್ವಜನಿಕರು ನಗರಸಭೆ ಕಚೇರಿಗೆ ಬಂದು ಯಾರೂ ಇಲ್ಲದ್ದನ್ನು ಕಂಡು ಹಿಂದಿರುಗುತ್ತಿದ್ದಾರೆ. ಸರಕಾರ ನಗರಸಭೆ ಕಚೇರಿ ಅಧಿಕಾರಿ ಸಿಬ್ಬಂದಿಗೆ ಸಂಬಳ ನೀಡುವುದು ಜನರ ಕೆಲಸ ಮಾಡಲು, ಆದರೆ ಅಧಿಕಾರಿ ಸಿಬ್ಬಂದಿ ಜನರ ಕೆಲಸ ಮಾಡುವುದನ್ನು ಬಿಟ್ಟು ಸಿನೆಮಾ ನೋಡುತ್ತಾ ಮನರಂಜನೆ ಪಡೆಯುತ್ತಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ, ಸರಕಾರಕ್ಕೆ ದೂರು ನೀಡಲಾಗುವುದು ಎಂದು ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್ ಎಚ್ಚರಿಸಿದರು.
ಸೋಮವಾರ ಬೆಳಗ್ಗೆ ನಗರಸಭೆ ಅಧ್ಯಕ್ಷ ವೇಣುಗೋಪಾಲ್, ಪೌರಾಯುಕ್ತ ಬಸವರಾಜ್ ಸೇರಿದಂತೆ ನಗರಸಭೆ ಆಡಳಿತ ಪಕ್ಷದ ಸದಸ್ಯರು ಹಾಗೂ ಅಧಿಕಾರಿ ಸಿಬ್ಬಂದಿ ನಗರದ ಶ್ರೀಲೇಖಾ ಚಿತ್ರಮಂದಿರದಲ್ಲಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ವೀಕ್ಷಣೆ ಮಾಡಿದ್ದು, ನಗರಸಭೆಯ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಿದ ಬಳಿಕ ಕಚೇರಿ ಕೆಲಸ ಮಾಡದೇ ಸಿನೆಮಾ ನೋಡಲು ಹೋಗಿದ್ದ ಪೌರಾಯುಕ್ತ ಹಾಗೂ ನಗರಸಭೆ ಅಧಿಕಾರಿ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.