ಹಾಸನ: ಮಗು ಅಪಹರಣ ಪ್ರಕರಣ; ಒಂದೇ ಕುಟುಂಬದ ಐವರು ಸೇರಿದಂತೆ ಏಳು ಮಂದಿ ಆರೋಪಿಗಳ ಬಂಧನ

Update: 2022-03-21 14:19 GMT
ಸಾಂದರ್ಭಿಕ ಚಿತ್ರ (photo credit - pti)

ಹಾಸನ: ಮಾ, 21: ಅರಕಲಗೂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಅಪಹರಣ ಸಂಬಂಧ ಒಂದೇ ಕುಟುಂಬದ ಐವರು ಸೇರಿದಂತೆ  ಏಳು ಮಂದಿ ಅರೋಪಿಗಳನ್ನು ಅರಕಲಗೂಡು ಪೊಲೀಸರು ಬಂಧಿಸಿದ್ದಾರೆ. 

ಮಾರ್ಚ್ 13ರಂದು ರಾತ್ರಿ ಅಸ್ಸಾಂ ಮೂಲದ ಕೂಲಿ ಕಾರ್ಮಿಕ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ನವಜಾತ ಶಿಶು ಅಪಹರಣವಾಗಿತ್ತು. ನರ್ಸ್ ಸೋಗಿನಲ್ಲಿ ಬಂದು ಮಗುವನ್ನು ಅಪಹರಿಸಿರುವ ಬಗ್ಗೆ ಆರೋಪಿಸಲಾಗದ್ದು,  ಈ ಕುರಿತಾದ ದೃಶ್ಯಾವಳಿ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಈ ಸಂಬಂಧ  ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ದೀಪಕ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಸಿಪಿಐ ಸತ್ಯನಾರಾಯಣ ನೇತೃತ್ವದ ತಂಡ, ಮಗು ಕಳವು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದೆ.

ಅರಕಲಗೂಡಿನ ಕೊಪ್ಪಲು ಗ್ರಾಮದ ಸುಮ (22) , ಯಶ್ವಂತ್ (28 )  ಬೆಂಗಳೂರಿನ ರಾಮನಗರ ಅಂಬೇಡ್ಕರ್ ನಗರದ ನಿವಾಸಿ ಅರ್ಪಿತಾ (24) ಅರಕಲಗೂಡು ತಾಲೂಕಿನ ಕಣಿಯರ್ ಕೊಪ್ಪಲು ಗ್ರಾಮದ ಶೈಲಜಾ (42)  ಮೈಸೂರು ನಗರದ ಹಳೆಕೆಸರೆ ಗ್ರಾಮದ ಸುಶ್ಮಾ (24)  ಅರಕಲಗೂಡು ತಾಲೂಕಿನ ಬರಗೂರು ಗ್ರಾಮದ ಕಾರು ಚಾಲಕ ಪ್ರಕಾಶ್  ಸೇರಿದಂತೆ ಮತ್ತೋರ್ವ ಬಂದನಕ್ಕೆ ಒಳಗಾಗಿರುವ ಆರೋಪಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರಕಲಗೂಡು ತಾಲೂಕು ಕೊಣನೂರು ಸಮೀಪದ ಕಣಿಯಾರು ಕೊಪ್ಪಲು ಗ್ರಾಮದ ಸುಶ್ಮಿತಾ ಎಂಬ ಯುವತಿಯನ್ನು ಮೈಸೂರಿಗೆ ವಿವಾಹ ಮಾಡಿಕೊಡಲಾಗಿತ್ತು. ಆದರೆ ಮದುವೆಯಾಗಿ 9 ವರ್ಷ ಕಳೆದಿದ್ದರೂ, ಮಕ್ಕಳಾಗಿರಲಿಲ್ಲ. ಇತ್ತೀಚೆಗೆ ಗರ್ಭಿಣಿಯಾಗಿದ್ದ ಸುಶ್ಮಿತಾ ತವರು ಮನೆಗೆ ಬಂದಿದ್ದರು. ಇದರಿಂದ 9 ವರ್ಷಗಳ ಮಕ್ಕಳಾಗಲಿಲ್ಲ ಎಂಬ ಕೊರಗು ದೂರವಾಗಲಿದೆ ಎಂದು ಎಲ್ಲರೂ ಸಂತಸಪಟ್ಟಿದ್ದರು. ದುರದೃಷ್ಟವಶಾತ್, ತವರು ಮನೆಗೆ ಬಂದ ಕೆಲವೇ ದಿನಗಳಲ್ಲಿ ಗರ್ಭಪಾತ ವಾಗಿತ್ತು ಎನ್ನಲಾಗಿದೆ. 

ಇದರಿಂದ ಸಹಜವಾಗಿಯೇ ನಿರಾಸೆಗೆ ಒಳಗಾಗ ಸುಶ್ಮಿತಾ ಹಾಗೂ ಮನೆಯವರು ಪತಿ ಹಾಗೂ ಅತ್ತೆ-ಮಾವ ಅವರಿಗೆ ಏನು ಹೇಳುವುದು ಎಂದು ಚಿಂತೆಗೆ ಬಿದ್ದಿದ್ದರು. ಈ ಅಪವಾದ ತಪ್ಪಿಸಿಕೊಳ್ಳಲು ಯುವತಿಯ ತಾಯಿ, ಸಹೋದರ, ಸಹೋದರಿ ಮತ್ತು ಆಕೆಯ ಸ್ನೇಹಿತೆ ಸೇರಿದಂತೆ ಒಟ್ಟು ಐವರು ತಾಲೂಕು ಆಸ್ಪತ್ರೆಗೆ ಬಂದು ಕಾದು ಕುಳಿತು ಮಗುವನ್ನು ಅಪಹರಣ ಮಾಡಿದ್ದರು. ಸುಶ್ಮಿತಾ ಸಹೋದರ ಯಶವಂತ್ ಎಂಬಾತ ಮಗುವನ್ನು ವಾಹನದಲ್ಲಿ ತೆಗೆದುಕೊಂಡು ಹೋಗಿ ನಂತರ ಮೈಸೂರಿಗೆ ಸಾಗಿಸಿದ್ದರು ಎಂದು ಎಸ್ ಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News