ಮೇಕೆದಾಟು ಯೋಜನೆ: ಬಿಜೆಪಿ ಸುಳ್ಳು ಹೇಳುತ್ತಿದೆ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ; ಸಿದ್ದರಾಮಯ್ಯ ಎಚ್ಚರಿಕೆ

Update: 2022-03-21 14:57 GMT

ಬೆಂಗಳೂರು, ಮಾ. 21: ‘ಬಿಜೆಪಿಯವರು ಮತ ಕ್ರೋಡೀಕರಣಕ್ಕಾಗಿ ಪರಿಸರ ಅನುಮತಿ ನೀಡದೆ ನಾಟಕವಾಡುತ್ತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಡಬ್ಬಲ್ ಇಂಜಿನ್ ಸರಕಾರವಿದೆ. ಕೂಡಲೇ ಅನುಮತಿ ತೆಗೆದುಕೊಳ್ಳಲಿಲ್ಲವೆಂದರೆ ಉಭಯ ಸರಕಾರಗಳು ಅನ್ಯಾಯ ಮಾಡುತ್ತಿದ್ದು, ರಾಜ್ಯದ ಬಿಜೆಪಿ ಸರಕಾರ ಸುಳ್ಳು ಹೇಳುತ್ತಿದೆ ಎಂಬ ತೀರ್ಮಾನಕ್ಕೆ ನಾವು ಬರಬೇಕಾಗುತ್ತದೆ' ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ 2018ರ ಫೆಬ್ರವರಿ 16ಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿದೆ. ಒಂದು ಸಾಮಾನ್ಯ ವರ್ಷದಲ್ಲಿ 177.25 ಟಿಎಂಸಿ ನೀರು ತಮಿಳುನಾಡಿಗೆ ಬಿಡುವಂತೆ ಆದೇಶ ಮಾಡಿದೆ. ಇದರ ನಿರ್ವಹಣೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಅಸ್ತಿತ್ವದಲ್ಲಿದೆ.

ಇಷ್ಟು ಪ್ರಮಾಣದ ನೀರು ಪಡೆಯುವುದು ಮಾತ್ರ ತಮಿಳುನಾಡಿಗಿರುವ ಹಕ್ಕು. ಈ ತೀರ್ಪು ಬಂದ ಮೇಲೆ ಸುಮಾರು 400 ಟಿಎಂಸಿಗೂ ಅಧಿಕ ನೀರು ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿದು ಹೋಗಿದೆ. ಹಾಗಾಗಿ ಕೇಂದ್ರ ಸರಕಾರ ಕೂಡಲೇ ಪರಿಸರ ಅನುಮತಿ ಕೊಡಬೇಕು. ಇದು ನಮ್ಮ ಪಾಲಿನ ನೀರು, ವ್ಯರ್ಥವಾಗಿ ತಮಿಳುನಾಡಿಗೆ ಹೋಗುತ್ತಿದೆ' ಎಂದು ಅವರು ಆಗ್ರಹಿಸಿದರು.

‘ಮೇಕೆದಾಟು ಅಣೆಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕದ ನಡುವೆ ವಿವಾದವೇ ಇಲ್ಲ. ಈ ವಿಚಾರ ಈಗಾಗಲೇ ಸುಪ್ರೀಂ ಕೋರ್ಟ್‍ನಲ್ಲಿ ಇತ್ಯರ್ಥವಾಗಿದೆ. ಕೇಂದ್ರ ಸರಕಾರ ಇಚ್ಛಾಶಕ್ತಿ ಮತ್ತು ಒಕ್ಕೂಟ ಧರ್ಮದ ಪಾಲನೆ ಮಾಡಬೇಕು. ಬಹಳ ಹಿಂದೆಯೇ ಪರಿಸರ ಅನುಮತಿ ಕೊಡಬೇಕಿತ್ತು, ಕೂಡಲೇ ಈ ಕೆಲಸ ಮಾಡಿ ಎಂದು ಮೊನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸಿದ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದೇವೆ, ಅವರು ಅನುಮತಿ ಪಡೆದುಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

‘ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮೇಕೆದಾಟು ಅಣೆಕಟ್ಟು ಯೋಜನೆ ಜಾರಿಯಾಗಬಾರದು ಎಂದು ಧರಣಿ ಕೂತಿದ್ದರು. ಹೀಗಾಗಿ ಬಿಜೆಪಿ ತಮಿಳುನಾಡಿನಲ್ಲಿ ತಮಗೆ ಮತ ಬರುತ್ತವೆ ಎಂಬ ಮನೋಭಾವದಲ್ಲಿ ವಿಳಂಬ ಧೋರಣೆ ಅನುಸರಿಸದೆ ಕೂಡಲೇ ಕೇಂದ್ರ ಪರಿಸರ ಇಲಾಖೆಯಿಂದ ಅನುಮೋದನೆ ಪಡೆದು ಮೇಕೆದಾಟು ಅಣೆಕಟ್ಟು ಯೋಜನೆಗೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News