ಭಗವದ್ಗೀತೆಯ ಯಾವುದೇ ಮೂಲ ದಾಖಲೆ ಇಲ್ಲ: ಕೇಂದ್ರ ಸಂಸ್ಕೃತಿ ಸಚಿವಾಲಯ

Update: 2022-03-21 15:07 GMT

ಬೆಂಗಳೂರು, ಮಾ.21: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ವಿಚಾರವಾಗಿ ಚರ್ಚೆಗಳು ಶುರುವಾಗಿರುವ ಸಂದರ್ಭದಲ್ಲಿಯೇ ಭಗವದ್ಗೀತೆಯ ಮೂಲ ಕುರಿತಂತೆ ಯಾವುದೇ ಮಾಹಿತಿ ಇಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಪ್ರತಿಕ್ರಿಯೆ ನೀಡಿದೆ. ಇದರಿಂದ, ರಾಜ್ಯದಲ್ಲಿ ಹೊಸ ಚರ್ಚೆಗಳು ಪ್ರಾರಂಭವಾಗುವ ಲಕ್ಷಣಗಳು ಕಂಡು ಬರುತ್ತಿವೆ. 

ಭಗವದ್ಗೀತೆಯ ಮೂಲ ಪುಟಗಳ ಮಾಹಿತಿ ಮತ್ತು ಆ ಪುಟಗಳನ್ನು ಯಾವ ಸ್ಥಳದಲ್ಲಿ ಸಂರಕ್ಷಿಸಿಡಲಾಗಿದೆ, ಇದಕ್ಕೆ ಸಂಬಂಧಿಸಿದಂತೆ ಯಾವುದಾದರೂ ಅಧಿಕೃತ ಪುಸ್ತಕಗಳು ಹಾಗೂ ಅವುಗಳನ್ನು ಪ್ರಕಟಿಸಿದ ಪ್ರಕಾಶನ ಸಂಸ್ಥೆಗಳ ಹೆಸರುಗಳ ಬಗ್ಗೆ ಮಾಹಿತಿ ನೀಡಿ ಎಂದು ಬೆಳಗಾವಿ ಮೂಲದ ವಕೀಲ ಸುರೇಂದ್ರ ಉಗಾರೆ ಅವರು 2005ರ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 4 ಮತ್ತು 6ರ ಅಡಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ಈ ಮಾಹಿತಿಯನ್ನು ಪಡೆಯುತ್ತಿರುವುದಾಗಿ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಸಿಪಿಐಒ ಮತ್ತು ಕೇಂದ್ರ ಸರಕಾರದ ಅಧೀನ ಕಾರ್ಯದರ್ಶಿ ಅಂಜನಾ, ಅಂತಹ ಮಾಹಿತಿ ಸಚಿವಾಲಯದ ತಮ್ಮ ವಿಭಾಗದಲ್ಲಿ ಲಭ್ಯವಿಲ್ಲ. ಈ ಉತ್ತರ ತೃಪ್ತಿದಾಯಕವಾಗಿರದಿದ್ದರೆ ಕಾಯಿದೆಯ ಸೆಕ್ಷನ್ 19ರ ಅಡಿ ಸಚಿವಾಲಯದ ಉಪ ಕಾರ್ಯದರ್ಶಿಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಈ ಕುರಿತು ಅವರಿಂದ ಪ್ರತಿಕ್ರಿಯೆ ದೊರೆತಿದೆ.

ಭಗವದ್ಗೀತೆಯನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಕುರಿತ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಮಾಹಿತಿ ಹಕ್ಕು ಕಾಯಿದೆಯಡಿ ಭಗವದ್ಗೀತೆಯ ಮೂಲ ದಾಖಲೆಗಳನ್ನು ಕೇಳಿ ಸಲ್ಲಿಸಿದ್ದ ಈ ಅರ್ಜಿಗೆ ಮಹತ್ವ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News