×
Ad

VIDEO- ಚಿಕ್ಕಮಗಳೂರು: ತಾನು ಬೆಳೆದ ಎಲೆಕೋಸು ಬೆಳೆಯನ್ನು ಟ್ರ್ಯಾಕ್ಟರ್ ಹರಿಸಿ ನಾಶಪಡಿಸಿದ ರೈತ!

Update: 2022-03-21 22:31 IST

ಚಿಕ್ಕಮಗಳೂರು, ಮಾ.21: ಎಲೆಕೋಸು ಬೆಳೆದಿದ್ದ ರೈತನೋರ್ವ ತಾನು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಹಾಗೂ ಬೆಂಬಲ ಬೆಲೆಯೂ ಇಲ್ಲದ ಕಾರಣಕ್ಕೆ ಬೇಸತ್ತು ಸುಮಾರು ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಎಲೆಕೋಸು ಬೆಳೆಯ ಮೇಲೆ ಟ್ರ್ಯಾಕ್ಟರ್ ಹರಿಸಿ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿರುವ ಘಟನೆ ತಾಲೂಕಿನ ಹಿರೇಗೌಜ ಗ್ರಾಮದಲ್ಲಿ ವರದಿಯಾಗಿದೆ.

ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ಗ್ರಾಮದ ತನುಜ್ ಕುಮಾರ್ ಎಂಬ ರೈತ ಕಳೆದ ನಾಲ್ಕು ತಿಂಗಳುಗಳ ಹಿಂದೆ ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ಎಲೆಕೋಸು ಬೆಳೆದಿದ್ದರು. ಎಲೆಕೋಸು ಬೆಳೆಯಲು ರೈತ ತನುಜ್ 75 ಸಾವಿರ ರೂ. ಹಣವನ್ನು ಬ್ಯಾಂಕ್‍ನಲ್ಲಿ ಸಾಲ ಮಾಡಿ ಖರ್ಚು ಮಾಡಿದ್ದರು. ಕಳೆದ 4 ತಿಂಗಳಿಂದ ಬೆಳೆ ಕಟಾವಿಗೆ ಬರುವವರೆಗೂ ನೀರು, ಗೊಬ್ಬರ, ಕೀಟನಾಶಕ ಸೇರಿದಂತೆ ಬೆಳೆ ಸಂರಕ್ಷಣೆ ಮಾಡಲು 50 ಸಾವಿರಕ್ಕೂ ಹೆಚ್ಚು ಹಣವನ್ನು ಕೈಸಾಲ ಮಾಡಿ ಖರ್ಚು ಮಾಡಿದ್ದರು.

ಸದ್ಯ ರೈತ ಬೆಳೆದಿದ್ದ ಎಲೆಕೋಸು ತನುಜ್ ಕುಮಾರ್ ಅವರ ಜಮೀನಿನಲ್ಲಿ ಸಮೃದ್ಧವಾಗಿ ಬೆಳೆದಿದ್ದು, ಕಟಾವಿಗೆ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಎಲೆಕೋಸಿನ ಬೆಲೆ ಪಾತಾಳಕ್ಕೆ ಕುಸಿದಿದ್ದು, ಮಾರುಕಟ್ಟೆಯಲ್ಲಿ ಎಲೆಕೋಸಿನ ಬೆಲೆ ಕೆಜಿಗೆ 2 ರೂ. ಇರುವುದರಿಂದ ರೈತ ತಾನು ಬೆಳೆದ ಬೆಳೆಯನ್ನು ಮಾರಲೂ ಆಗದೇ ಹೊಲದಲ್ಲೂ ಬಿಡಲಾಗದೇ ಬೇಸತ್ತಿದ್ದಾರೆ. ಬೇರೆ ದಾರಿ ಕಾಣದೇ ಕಳೆದ ಬುಧವಾರ ಟ್ರ್ಯಾಕ್ಟರ್ ಅನ್ನು ಎಲೆಕೋಸು ಬೆಳೆ ಮೇಲೆ ಹರಿಸಿ ಸಂಪೂರ್ಣವಾಗಿ ನಾಶ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News