×
Ad

ಹಾರಂಗಿ ಬಳಿ ಕೊಡಗಿನ 3 ನೇ ಸಾಕಾನೆ ಶಿಬಿರ; ಯೋಜನೆಗೆ ಅಂತಿಮ ಸ್ಪರ್ಷ

Update: 2022-03-21 22:37 IST

ಮಡಿಕೇರಿ ಮಾ.21 : ಕುಶಾಲನಗರದ ಹಾರಂಗಿ ಜಲಾಶಯದ ಬಳಿಯಲ್ಲಿ ಜಿಲ್ಲೆಯ 3ನೇ ಸಾಕಾನೆಗಳ ಶಿಬಿರ ನಿರ್ಮಾಣಗೊಂಡಿದ್ದು, ಈ ಶಿಬಿರ ಮುಂದಿನ ಜೂನ್, ಜುಲೈ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ. ರಾಜ್ಯ ಸರಕಾರದ 50 ಲಕ್ಷ ರೂ.ಗಳ ಆರಂಭಿಕ ಅನುದಾನದಲ್ಲಿ ಸಾಕಾನೆ ಶಿಬಿರಕ್ಕೆ ಅಗತ್ಯವಿರುವ ಪ್ರಾಥಮಿಕ ಹಂತದ ಶೇ.90 ರಷ್ಟು ಕಾಮಗಾರಿಗಳನ್ನು ಮುಕ್ತಾಯ ಮಾಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೆ ಮತ್ತಿಗೋಡು ಮತ್ತು ದುಬಾರೆಯಲ್ಲಿ ಸಾಕಾನೆ ಶಿಬಿರಗಳಿದ್ದು, ಮೂರನೇ ಶಿಬಿರವಾಗಿ ಹಾರಂಗಿ ಗುರುತಿಸಿಕೊಳ್ಳಲಿದೆ. ಈ ಯೋಜನೆಯಿಂದಾಗಿ ಭವಿಷ್ಯದಲ್ಲಿ ಜಿಲ್ಲೆಯ ಕಡೆಗೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.

ಹಾರಂಗಿ ಜಲಾಶಯಕ್ಕೆ ಹೊಂದಿಕೊಂಡಂತಿರುವ ಬಲ ಭಾಗದ  ಹಿನ್ನೀರಿನ ದಂಡೆಯಲ್ಲಿ ಶಿಬಿರ ನಿರ್ಮಿಸಲಾಗಿದೆ. ಅರಣ್ಯ ಇಲಾಖೆಯ 40 ಎಕರೆ ಪ್ರದೇಶದಲ್ಲಿ ಈಗಾಗಲೇ ಟ್ರೀ ಪಾರ್ಕ್ ಮಾಡಲು ಉದ್ದೇಶಿಸಿ ಕಾಯ್ದಿರಿಸಿರುವ ಜಾಗದಲ್ಲಿ 8-10 ಎಕರೆ ಪ್ರದೇಶದಲ್ಲಿ ಸಾಕಾನೆ ಶಿಬಿರ ತಲೆ ಎತ್ತಿದೆ.

ಹಾರಂಗಿ ಶಿಬಿರದಲ್ಲಿ ಮಾವುತರಿಗೆ 4 ವಸತಿಗೃಹ, ಆನೆಗಳಿಗೆ ಆಹಾರ ತಯಾರಿಸಲು ಅಡುಗೆ ಮನೆ, ಎರಡು ಉಗ್ರಾಣ ಸೇರಿದಂತೆ ಶಿಬಿರ ವೀಕ್ಷಣೆಗೆ ಆಗಮಿಸುವವರಿಗೆ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದ್ದು, ಶಿಬಿರಕ್ಕೆ ಕುಡಿವ ನೀರಿನ ಉದ್ದೇಶಕ್ಕೆ ಕೊಳವೆ ಬಾವಿ ಕೊರೆಯಲಾಗಿದೆ.  ಅರಣ್ಯ ಪ್ರದೇಶಕ್ಕೆ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸಂಪರ್ಕ ಕಾಮಗಾರಿ ಪ್ರಗತಿಯಲ್ಲಿದ್ದು ಯುಜಿ ಕೇಬಲ್‍ಗಳನ್ನು ಬಳಸಿ ಅಂಡರ್ ಗ್ರೌಂಡ್ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ನಡೆಸಲಾಗುತ್ತಿದೆ.

ಹೈಕೋರ್ಟ್ ಆದೇಶ

ಸಾಕಾನೆ ಶಿಬಿರಗಳಲ್ಲಿ ಅಗತ್ಯ ಸಂಖ್ಯೆಗಿಂತ ಹೆಚ್ಚು ಸಾಕಾನೆಗಳಿದ್ದು, ಅವುಗಳ ಒತ್ತಡವನ್ನು ತಗ್ಗಿಸಲು ಹೈಕೋರ್ಟ್ ಈ ಹಿಂದೆ ಸರಕಾರಕ್ಕೆ ಆದೇಶ ನೀಡಿತ್ತು. ಒಂದು ಕ್ಯಾಂಪ್‍ನಲ್ಲಿ 15 ಸಾಕಾನೆಗಳು ಇರಬೇಕು ಎಂಬ ನಿಯಮವಿದ್ದು, ಅದರಂತೆ ದುಬಾರೆ ಆನೆ ಕ್ಯಾಂಪ್‍ನಲ್ಲಿ ಸಾಕಾನೆಗಳಿಗೆ ಒತ್ತಡ ತಪ್ಪಿಸುವ ನಿಟ್ಟಿನಲ್ಲಿ ಹೊಸ ಶಿಬಿರ ಯೋಜನೆ ಜಾರಿಗೆ ತರಲಾಗಿದೆ. 

ಪ್ರಸ್ತುತ ದುಬಾರೆಯಲ್ಲಿ 31 ಸಾಕಾನೆಗಳಿದ್ದು ಒತ್ತಡ ಹೆಚ್ಚಿರುವ ಕಾರಣ ಪ್ರಾರಂಭಿಕವಾಗಿ ಹಾರಂಗಿಗೆ 5 ಸಾಕಾನೆಗಳನ್ನು ಸ್ಥಳಾಂತರಿಸಲಾಗುವುದು. ಹೆಚ್ಚಿನ ಸೌಲಭ್ಯಕ್ಕೆ ಅನುದಾನ ಬಿಡುಗಡೆಗೊಂಡ ಬಳಿಕ ಅಗತ್ಯ ಮೂಲಭೂತ ವ್ಯವಸ್ಥೆ ಕಲ್ಪಿಸಿ ಹಂತಹಂತವಾಗಿ ಮತ್ತಷ್ಟು ಸಾಕಾನೆಗಳನ್ನು ದುಬಾರೆಯಿಂದ ಹಾರಂಗಿಗೆ ಸ್ಥಳಾಂತರಿಸಲಾಗುವುದು ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ಜೆ.ಅನನ್ಯ ಕುಮಾರ್ ಮಾಹಿತಿ ನೀಡಿದ್ದಾರೆ. 

ಹಾರಂಗಿ ಶಿಬಿರಕ್ಕೆ ಅತ್ತೂರು ಮೀಸಲು ಅರಣ್ಯ ಹೊಂದಿಕೊಂಡಿದ್ದು ಸುಮಾರು 2 ಸಾವಿರ ಎಕರೆ ವಿಸ್ತೀರ್ಣ ಸಾಕಾನೆಗಳ  ಓಡಾಟ ಮತ್ತು ಮೇಯಲು ಅನುಕೂಲ ಪ್ರದೇಶವಾಗಿದೆ. ಮಾತ್ರವಲ್ಲದೇ, ಸಾಕಾನೆಗಳ ಮಜ್ಜನ ಸೇರಿದಂತೆ ಅಗತ್ಯವಾಗಿ ಬೇಕಿರುವ ನೀರಿನ ಸೌಲಭ್ಯಕ್ಕೆ ಹಾರಂಗಿ ಹಿನ್ನೀರು ಪ್ರದೇಶ ಸೂಕ್ತವಾಗಿರುವುದನ್ನು ಮನಗಂಡು ಈ ಪ್ರದೇಶದಲ್ಲಿ ಸಾಕಾನೆ ಶಿಬಿರ ತೆರೆÀಯಲು ರಾಜ್ಯ ವನ್ಯಜೀವಿ ವಿಭಾಗದ ಹಿರಿಯ ಅಧಿಕಾರಿಗಳು ಸಮ್ಮತಿ ಸೂಚಿಸಿದ್ದರು.

ಮತ್ತಷ್ಟು ಆಕರ್ಷಣೆ 

ಹಾರಂಗಿ ಅಣೆಕಟ್ಟೆ ವೀಕ್ಷಣೆಗೆ ಹೆಚ್ಚಿನ ಮಂದಿ ಪ್ರವಾಸಿಗರು ಆಗಮಿಸುತ್ತಾರೆ.  ಪ್ರವಾಸೋದ್ಯಮಕ್ಕೆ ಮ್ತತಷ್ಟು ಒತ್ತು ನೀಡುವ ನಿಟ್ಟಿನಲ್ಲಿ ಜಂಗಲ್ ಲಾಡ್ಜಸ್ ಆಶ್ರಯದಲ್ಲಿ ಹಾರಂಗಿ ಹಿನ್ನೀರಿನಲ್ಲಿ ವಾಟರ್ ಸ್ಪೋಟ್ರ್ಸ್ ಆರಂಭಿಸುವ ಯೋಜನೆ ರೂಪಿಸಲಾಗುತ್ತಿದೆ. ಜೆಟ್ ಸ್ಕಿ, ಪ್ಯಾರಾ ಸೈಲಿಂಗ್ ಕ್ರೀಡೆ ನಡೆಸಬಹುದ ಎನ್ನುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಅಧಿಕಾರಿಗಳ ಸಮಕ್ಷಮದಲ್ಲಿ ಈಗಾಗಲೆ ಪ್ರಯೋಗಾರ್ಥ ಪರೀಕ್ಷೆ ಕೂಡ ನಡೆಸಲಾಗಿದ್ದು, ಯೋಜನೆ ಪ್ರಗತಿಯಲ್ಲಿದೆ. ಜಲಾಶಯ ಮುಂಭಾಗದ ಕಾವೇರಿ  ನೀರಾವರಿ ನಿಗಮದ ವತಿಯಿಂದ  ಈಗಾಗಲೇ ಬೃಂದಾವನವಿದ್ದು ಇದರ ಜೊತೆಯಲ್ಲಿ ಅತ್ಯಾಕರ್ಷಕವಾದ   ಸಂಗೀತ ಕಾರಂಜಿಯೂ ಇದೆ. ಅರಣ್ಯ ಇಲಾಖೆಯ ವತಿಯಿಂದ ಆನೆ ಕ್ಯಾಂಪ್, ಟ್ರೀ ಪಾರ್ಕ್ ಆರಂಭವಾದಲ್ಲಿ ಮತ್ತಷ್ಟು ಆಕರ್ಷಣೆ ಪಡೆದುಕೊಳ್ಳಲಿದೆ. ಹಾರಂಗಿ ಸಾಕಾನೆ ಶಿಬಿರದ ಪ್ರವೇಶ ದ್ವಾರದಿಂದ ಆನೆ ಕ್ಯಾಂಪ್ ಒಂದು ಕಿ.ಮೀ.ನಷ್ಟು ದೂರದಲ್ಲಿರುವ ಕಾರಣ ಪ್ರವಾಸಿಗರನ್ನು ಸಾಗಿಸಲು ಪರಿಸರಕ್ಕೆ ಹಾನಿಯಾಗದ ‘ಎಲೆಕ್ರ್ಟಿಕ್ ಬಗ್ಗಿ’ ವಿದ್ಯುತ್ ಚಾಲಿತ ವಾಹನಗಳನ್ನು ಬಳಸುವ ಯೋಜನೆಯಿದೆ.

ಶೇ.90 ರಷ್ಟು ಪೂರ್ಣಗೊಂಡಿದೆ

ನೂತನ ಆನೆ ಕ್ಯಾಂಪ್ ಆರಂಭಿಸಲು ಸರಕಾರದಿಂದ ಬಿಡುಗಡೆಗೊಂಡ 50 ಲಕ್ಷ ಅನುದಾನದಲ್ಲಿ ಹಾರಂಗಿಯಲ್ಲಿ ಈಗಾಗಲೇ ಆರಂಭಿಸಿರುವ ಕಾಮಗಾರಿಗಳ ಕೆಲಸ ಶೇ.90ರಷ್ಟು ಪೂರ್ಣಗೊಂಡಿದೆ. ಶಿಬಿರಕ್ಕೆ ಅಧಿಕಾರಿ, ಸಿಬ್ಬಂದಿ ವರ್ಗ, ಆಸ್ಪತ್ರೆ, ವೈದ್ಯಾಧಿಕಾರಿ ನೇಮಕಾತಿ ಹಂತಹಂತವಾಗಿ ರಾಜ್ಯ ಮಟ್ಟದಿಂದ ಆಗಲಿದೆ. ಸೌಲಭ್ಯಗಳಿಗೆ ಅನುಗುಣವಾಗಿ ದುಬಾರೆಯಿಂದ 15 ಸಾಕಾನೆಗಳನ್ನು ಹಾರಂಗಿಗೆ ಸ್ಥಳಾಂತರಿಸುವ ಕಾರ್ಯ ಹಂತ ಹಂತವಾಗಿ ನಡೆಯಲಿದೆ. 

ಜೆ.ಅನನ್ಯಕುಮಾರ್ ಕುಶಾಲನಗರ ವಲಯ ಅರಣ್ಯಾಧಿಕಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News