×
Ad

ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತರಬೇಕು: ಶಾಸಕ ಎನ್.ಮಹೇಶ್ ಆಗ್ರಹ

Update: 2022-03-21 22:47 IST

ಬೆಂಗಳೂರು, ಮಾ. 21: ‘ಪರಿಶಿಷ್ಟ ಜಾತಿ ಮತು ಪರಿಶಿಷ್ಟ ವರ್ಗ(ಎಸ್ಸಿ-ಎಸ್ಟಿ)ದವರಿಗೆ ಮಂಜೂರು ಮಾಡಿದ ಭೂ ಪರಭಾರೆ ನಿಷೇಧ ಕಾಯ್ದೆಗೆ(ಪಿಟಿಸಿಎಲ್) ತಿದ್ದುಪಡಿ ತರಬೇಕು. ಎಸ್ಸಿಪಿ-ಟಿಎಸ್ಪಿ ಯೋಜನೆ ಅನುದಾನವನ್ನು ‘ಡೀಮ್ಡ್ ವೆಚ್ಚ'ದ ಹೆಸರಿನಲ್ಲಿ ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದನ್ನು ತಡೆಗಟ್ಟುವ ಸಂಬಂಧದ ಕಲಂ ‘7ಡಿ' ರದ್ದು ಪಡಿಸಬೇಕು' ಎಂದು ಕೊಳ್ಳೆಗಾಲ ಕ್ಷೇತ್ರದ ಶಾಸಕ ಎನ್.ಮಹೇಶ್ ಒತ್ತಾಯಿಸಿದ್ದಾರೆ.

ಸೋಮವಾರ ವಿಧಾನಸಭೆಯಲ್ಲಿ 2022-23ನೆ ಸಾಲಿನ ನುದಾನ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಭೂ ಪರಭಾರೆ ಕಾಯ್ದೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳ ತೀರ್ಪುಗಳ ಹಿನ್ನೆಲೆಯಲ್ಲಿ ದಲಿತ ಸಮುದಾಯದವರ ಭೂಮಿ ಅವರ ಕೈತಪ್ಪುವ ಆತಂಕವಿದೆ. ಹೀಗಾಗಿ ಕಾಯ್ದೆ ತಿದ್ದುಪಡಿ ತರುವ ಮೂಲಕ ಆ ಸಮುದಾಯಕ್ಕೆ ಮಂಜೂರು ಮಾಡಿದ ಭೂಮಿ ಅವರ ಹೆಸರಿನಲ್ಲೇ ಉಳಿಸುವ ಮೂಲಕ ಶೋಷಿತ ಸಮುದಾಯವನ್ನು ಭೂ ಒಡೆತನವನ್ನು ಮುಂದುವರಿಸಬೇಕು' ಎಂದು ಕೋರಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟಪಂಗಡದ ಜನಸಂಖ್ಯೆ ಆಧಾರದಲ್ಲಿ ಆಯವ್ಯಯವನ್ನು ಹಂಚಿಕೆ ಮಾಡುವ ಉದ್ದೇಶದಿಂದ ‘ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟುಗಳ ಉಪ ಹಂಚಿಕೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಅಧಿನಿಯಮವನ್ನು ಜಾರಿಗೆ ತಂದಿದ್ದು, ಅನುದಾನ ಮೀಸಲಿಡಲಾಗಿದೆ. ಆದರೆ, ಡೀಮ್ಡ್ ವೆಚ್ಚದ ಹೆಸರಿನಲ್ಲಿ ಮೀಸಲಿಟ್ಟ ಅನುದಾನವನ್ನು ಮೂಲಭೂತ ಸೌಕರ್ಯ ಕಾಮಗಾರಿಗಳಿಗೆ ಬಳಕೆ ಮಾಡುವುದನ್ನು ತಪ್ಪಿಸಬೇಕು. ಈ ಸಂಬಂಧದ ‘7ಡಿ' ರದ್ದು ಮಾಡಬೇಕು ಎಂದು ಮಹೇಶ್ ಸಲಹೆ ನೀಡಿದರು.

‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ಎಸ್ಸಿ-ಎಸ್ಟಿ)ದ ವಿದ್ಯಾರ್ಥಿಗಳು ಹಾಸ್ಟೇಲ್ ಸೌಲಭ್ಯ ಪಡೆಯಲು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗಿಂತ ಕಡಿಮೆ ಆದಾಯ ಮಿತಿ ನಿಗದಿಪಡಿಸಿದ್ದು ಅದನ್ನು 10 ಲಕ್ಷ ರೂ.ಗಳ ಮಿತಿಗೆ ಹೆಚ್ಚಿಸಬೇಕು. ‘ವಿದ್ಯಾಸಿರಿ' ಯೋಜನೆಯಡಿ ಒಬಿಸಿ ವಿದ್ಯಾರ್ಥಿಗಳಿಗೆ ನೀಡುವ ಮಾದರಿಯಲ್ಲೇ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಇಬಿಎಲ್ ಚಾರ್ಜ್ ಅನ್ನು ನೀಡಬೇಕು' ಎಂದು ಮಹೇಶ್ ಇದೇ ವೇಳೆ ಆಗ್ರಹಿಸಿದರು.

‘ಎಸ್ಸಿ-ಎಸ್ಟಿ ವರ್ಗದ ಜನರ ಶಿಕ್ಷಣ, ಉದ್ಯೋಗ ಮತ್ತು ಆರ್ಥಿಕ ಸಬಲೀಕರಣ ದೃಷ್ಟಿಯಿಂದ ಆ ಸಮುದಾಯದ ನಿರುದ್ಯೋಗಿಗಳಿಗೆ ವಾಹನ ಖರೀದಿಗೆ ಸಬ್ಸಿಡಿ, ಭೂ ಒಡೆತನ ಯೋಜನೆ ಹಾಗೂ ಕೊಳವೆಬಾವಿ ಕೊರೆಸುವ ಯೋಜನೆಗಳಿಂದ ಹೆಚ್ಚಿನ ಅನುಕೂಲವಾಗಿದೆ. ಜೊತೆಗೆ ವಿದ್ಯಾರ್ಥಿಗಳು ಶೈಕ್ಷಣಿಕ ಉನ್ನತಿಗೆ ಸರಕಾರ ಆದ್ಯತೆ ನೀಡಬೇಕು' ಎಂದು ಮಹೇಶ್ ಒತ್ತಾಯಿಸಿದರು.

‘ಎಸ್ಸಿಪಿ-ಟಿಎಸ್ಪಿ ಯೋಜನೆ ಜಾರಿಗೊಳಿಸಿ ಹತ್ತು ವರ್ಷಗಳು ಕಳೆದಿದ್ದು, ವಾರ್ಷಿಕ 25 ಸಾವಿರ ಕೋಟಿ ರೂ.ಗಳಂತೆ ಅಂದಾಜು ಮಾಡಿದರೂ ಈವರೆಗೆ ಎಸ್ಸಿ-ಎಸ್ಟಿ ವರ್ಗಕ್ಕೆ 2.50ಲಕ್ಷ ಕೋಟಿ ರೂ.ಗಳನ್ನು ಒದಗಿಸಿದ್ದು, ಆ ಮೊತ್ತವನ್ನು ರಾಜ್ಯದಲ್ಲಿನ 1.50ಲಕ್ಷ ಕೋಟಿ ದಲಿತರ ಜನಸಂಖ್ಯೆಯ ಪೈಕಿ 30 ಲಕ್ಷ ಕುಟುಂಬಗಳಿಗೆ ಹಂಚಿಕೆ ಮಾಡಿದರೆ ತಲಾ 8.33ಲಕ್ಷ ರೂ.ಗಳ ನಗದು ಅಥವಾ ಆಸ್ತಿ ಸೃಜನೆ ಆಗಿರಬೇಕು. ಆದರೆ, ಆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧ್ಯವಾಗಿಲ್ಲ. ಸಮುದಾಯದ ಆರ್ಥಿಕ ಸಬಲೀಕರಣಕ್ಕೆ ಆಸ್ಥೆ ವಹಿಸಬೇಕು' ಎಂದು ಮಹೇಶ್ ಆಗ್ರಹಿಸಿದರು.

‘ವಿಶ್ವ ವಿದ್ಯಾಲಯಗಳು ದಲಿತ ಸಮುದಾಯದ ಸ್ನಾತಕೋತ್ತರ ಪದವೀಧರರಿಗೆ ಮನಸೋ ಇಚ್ಛೆ ಫೆಲೋಶಿಪ್ ನೀಡುತ್ತಿದ್ದು, ಅದನ್ನು ವೆಚ್ಚ ಹಾಗೂ ಮಾರುಕಟ್ಟೆ ದರವನ್ನು ಆಧರಿಸಿ ವೈಜ್ಞಾನಿಕ ರೀತಿಯಲ್ಲಿ ನಿಗದಿಪಡಿಸಬೇಕು. ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರು ಕರ್ನಾಟಕಕ್ಕೆ ಭೇಟಿ ನೀಡಿದ ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ಘೋಷಣೆಯನ್ನು ಸಿಎಂ ಮಾಡಿದ್ದು, ಎಸ್ಸಿ-ಎಸ್ಟಿ ಸಮುದಾಯದ ಮೇಲಿನ ಕೃತಜ್ಞತಾ ಭಾವದಿಂದಲೇ ಅವರ ಈ ಕಾರ್ಯ ಮಾಡಿದ್ದಾರೆ' ಎಂದು ಮಹೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

‘ಪರಿಶಿಷ್ಟ ಜಾತಿ ಮತು ಪರಿಶಿಷ್ಟ ವರ್ಗ(ಎಸ್ಸಿ-ಎಸ್ಟಿ)ದ ಭೂಮಿ ಪರಭಾರೆ ನಿಷೇಧ ಕಾಯ್ದೆ(ಪಿಟಿಸಿಎಲ್)ಗೆ ತಿದ್ದುಪಡಿ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದ್ದು, ಆ ಭೂಮಿ ಆ ಸಮುದಾಯದವರ ಕೈಯಲ್ಲೇ ಉಳಿಯಬೇಕು. ಒಂದು ವೇಳೆ ಸುತ್ತೋಲೆ ಉಲ್ಲಂಘಿಸಿದ ಜಿಲ್ಲಾಧಿಕಾರಿಗಳ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಜರುಗಿಸಲಾಗುವುದು'

-ಆರ್.ಅಶೋಕ್ ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News